×
Ad

ಪಿಯು ಕಾಲೇಜುಗಳ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ

Update: 2017-08-29 17:57 IST

ಚಿಕ್ಕಮಗಳೂರು, ಆ.29: ಪಿಯು ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿಸೆಂಬರ್ ನಂತರ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪಿಯು ಕಾಲೇಜುಗಳ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದರು.

ಅವರು ಮಂಗಳವಾರ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಿಯು ಕಾಲೇಜುಗಳ ಉಪನ್ಯಾಸಕರ ಸಂಘ ಮತ್ತು ರಾಜ್ಯ ಸಹಕಾರ ಮಹಾಮಂಡಳ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದರು. ಪಿ.ಯು ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆ, ವರ್ಗಾವಣೆ ನೀತಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ 2011 ರಿಂದ ಇದುವರೆಗೆ 9 ಬಾರಿ ಪ್ರತಿಭಟನೆ ನಡೆಸಿದ್ದೇವೆ. 8 ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಕಳೆದ ಏಪ್ರಿಲ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಈ ಬಾರಿ ಪ್ರತಿಭಟನೆ ನಡೆಸಲಿಲ್ಲ ಎಂದು ತಿಳಿಸಿದರು.

ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ, ಸಾಹಿತಿ ಡಾ.ರಹಮತ್ ತರೀಕೆರೆ ನಮಗೆ ಬೇಕಾಗಿರುವ ಶಿಕ್ಷಣ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಶಿಕ್ಷಣದ ಬಗ್ಗೆ ಪ್ರೀತಿವುಳ್ಳವರು ಶಿಕ್ಷಕ ವೃತ್ತಿಗೆ ಬರಬೇಕು, ತಾಯಿಯಾಗದವರು, ಸ್ನೇಹಿತರಾಗದವರು, ಶಿಕ್ಷಕರಾಗಬಾರದು ಎಂದು ಕಿವಿಮಾತು ಹೇಳಿದರು.

ನಿವೃತ್ತ ಪ್ರಾಂಶುಪಾಲ ಡಾ.ಹೆಚ್.ಎಸ್.ಗಣೇಶಭಟ್ಟ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಉಪನ್ಯಾಸಕರ ಪಾತ್ರ ವಿಷಯ ಕುರಿತು ಮಾತನಾಡಿ, ರಾಜ್ಯ ಸರ್ಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಮುಂದಾಗಿದೆ. 6-7-8 ನೇ ತರಗತಿಗಳಿಗೆ ಸಿಬಿಎಸ್‍ಸಿ ವಿಧಾನ ಅಳವಡಿಸಲಿದೆ ಈ ಹಿನ್ನೆಲೆಯಲ್ಲಿ ಶಿಕ್ಷಕರು ಉಪನ್ಯಾಸದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ವೇಗದ ಚಲನಶೀಲ ಸಮಾಜದಲ್ಲಿ ನಾವು ಎಷ್ಟು ಹಿಂದುಳಿದಿದ್ದೇವೆ ಎಂದು ನುಡಿದರು.

ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಎಸ್.ಎಲ್.ಭೋಜೇಗೌಡ ಮಾತನಾಡಿದರು. ಪಿಯು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಎಸ್.ದೇವರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಳೆದ ಸಾಲಿನ ಪಿ.ಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕರಿಸಲಾಯಿತು. ನಿವೃತ್ತ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.

  ಪಿಯು ಕಾಲೇಜುಗಳ ಉಪನ್ಯಾಸಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎಸ್.ನಿಂಗೇಗೌಡ, ಜಿಲ್ಲಾಧ್ಯಕ್ಷ ಡಾ.ಎಂ.ಡಿ.ಸುದರ್ಶನ್, ಖಜಾಂಚಿ ದೇವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್.ಮಂಜುನಾಥ ಭಟ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಬಿ.ಪರಮೇಶ್ವರಪ್ಪ, ಪಿಯು ಕಾಲೇಜುಗಳ ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಹೆಚ್.ನಾಗರಾಜಪ್ಪ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಆರ್.ಪ್ರಭಾಕರ್, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಅಧ್ಯಕ್ಷ ಕೆ.ಹೆಚ್.ಚಂದ್ರಶೇಖರ ಆರಾಧ್ಯ ಉಪಸ್ಥಿತರಿದ್ದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಭರವಸೆಯನ್ನು ಈಡೇರಿಸದಿರುವುದರಿಂದ ಅತೀವ ನೋವಾಗಿದೆ. ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳ ಈಡೇರಿಕೆಗೆ ಷರತ್ತುಗಳನ್ನು ವಿಧಿಸಿದೆ. ರಾಜ್ಯ ಸರ್ಕಾರದ ಖಾಸಗೀಕರಣ ನೀತಿಯಿಂದಾಗಿ ಅನುದಾನಿತ ಕಾಲೇಜುಗಳು ಪ್ರಾಥಮಿಕ, ಪ್ರೌಢಶಾಲೆಗಳು, ಕಾಲೇಜುಗಳು ಮುಚ್ಚುತ್ತಿವೆ. ಇದರಿಂದಾಗಿ ಭವಿಷ್ಯದಲ್ಲಿ ಶಿಕ್ಷಕರ, ಉಪನ್ಯಾಕರ ಭವಿಷ್ಯ ಅಯೋಮಯವಾಗುತ್ತದೆ. ಉಪನ್ಯಾಸಕರ ವರ್ಗಾವಣೆ ವಿಷಯ ಗೆಜೆಟ್‍ನಲ್ಲಿಲ್ಲ, ಎಲ್ಲಾ ಶಾಸಕರು ಸೇರಿ ಕರಾಳ ಶಾಸನವನ್ನು ಜಾರಿಗೆ ತಂದಿದ್ದಾರೆ. ರಾಜ್ಯ ಸರ್ಕಾರ ಭರವಸೆಯನ್ನು ಈಡೇರಿಸುವುದೇ ಎಂದು ಡಿಸೆಂಬರ್‍ವರೆಗೆ ಕಾಯಲಾಗುವುದು. ನಂತರ ತೀವ್ರ ಸ್ವರೂಪದ ಹೋರಾಟಕ್ಕೆ ಅಣಿಯಾಗಬೇಕಾಗಿದ್ದು ಅದಕ್ಕೆ ಎಲ್ಲಾ ಉಪನ್ಯಾಸಕರು ಕೈಜೋಡಿಸಬೇಕು’
- ತಿಮ್ಮಯ್ಯ ಪುರ್ಲೆ, ರಾಜ್ಯಾಧ್ಯಕ್ಷ, ಪಿಯು ಕಾಲೇಜುಗಳ ಉಪನ್ಯಾಸಕರ ಸಂಘ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News