ಹಾಸನ: ಮಹಾಮಸ್ತಾಭಿಷೇಕ ಪ್ರಾತ್ಯಕ್ಷತೆ ವೀಕ್ಷಣೆ
ಹಾಸನ, ಆ.29: 2018ರ ಮಾರ್ಚ್‍ನಲ್ಲಿ ನಡೆಯುವ ಶ್ರವಣಬೆಳಗೊಳದ ಗೋಮಟೇಶ್ವರ ಮಹಾಮಸ್ತಾಭಿಷೇಕ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿದ್ದ ಪ್ರಾತ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‍ರಾಜ್ ಸಿಂಗ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಜಾನಕಿ ಸೇರಿದಂತೆ ಇತರೆ ಅಧಿಕಾರಿಗಳು ವೀಕ್ಷಣೆ ಮಾಡಿ ವಿವರ ಪಡೆದರು.
ಮಹಾಮಸ್ತಾಭಿಷೇಕ ನಡೆಯುವ ಸಮಯಕ್ಕೆ ಅಭಿಷೇಕ ಮಾಡಲು 12 ಕೋಟಿ ರೂ. ವೆಚ್ಚದಲ್ಲಿ ಎತ್ತರಕ್ಕೆ ಹತ್ತಲು ನಿರ್ಮಿಸಲಾಗುವ ಕಬ್ಬಣದ ಮೆಟ್ಟಿಲುಗಳ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರದರ್ಶಿಸಲಾಯಿತು. ಒಂದು ಬಾರಿಗೆ ಸಾವಿರಾರು ಜನರು ಮೇಲೆ ಸಾಗಲು ಸಿದ್ಧಪಡಿಸಲಾಗಿದೆ. ಇತರೆ ಭಾಗಗಳಿಂದ ವಸ್ತುಗಳನ್ನು ಸಾಗಿಸಲು ಒಂದು ತಿಂಗಳು ಕಾಲ ಬೇಕಾಗುತ್ತದೆ. ನಿರ್ಮಿಸಲು ಒಂದುವರೆ ತಿಂಗಳು ಸೇರಿ ಒಟ್ಟು ಎರಡುವರೆ ತಿಂಗಳ ಕಾಲ ಸಮಯ ಬೇಕಾಗಿದೆ. ಅಸ್ಸಾಂನಿಂದ 400ಕ್ಕೂ ಹೆಚ್ಚು ಜನ ಕೆಲಸಗಾರರು ಅವಶ್ಯಕವಾಗಿದೆ ಎಂದು ಮ್ಯಾನೇಜರ್ ರಮೇಶ್ ಇದೇ ವೇಳೆ ತಿಳಿಸಿದರು.