×
Ad

ಮೂಡಿಗೆರೆ: ಡಿವೈಎಸ್ಪಿ ನೇತೃತ್ವದಲ್ಲಿ ಶಾಂತಿ ಸಭೆ

Update: 2017-08-29 23:29 IST

ಮೂಡಿಗೆರೆ, ಆ.29: ಮುಸ್ಲೀಂಮರ ಪವಿತ್ರ ಹಬ್ಬ ಬಕ್ರೀದ್ ಬಗ್ಗೆ ಚರ್ಚಿಸಲು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಡಿವೈಎಸ್‍ಪಿ ಶೇಖ್ ಹುಸೇನ್ ನೇತೃತ್ವದಲ್ಲಿ ಮುಸ್ಲಿಂ ಮುಖಂಡರ ಶಾಂತಿ ಸಭೆ ಮಂಗಳವಾರ ನಡೆಯಿತು.

ಸೆ.1 ಮತ್ತು 2 ರಂದು ಬಕ್ರೀದ್ ಹಬ್ಬ ನಡೆಯಲಿದ್ದು, ಅಂದು ಪಟ್ಟಣಕ್ಕೆ ವಿವಾದಿತ ಭಾಷಣಕಾರನೊಬ್ಬ ಬರುತ್ತಿದ್ದು, ಮುಸ್ಲೀಂಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿ ಶಾಂತಿ ಕದಡಲು ಷಡ್ಯಂತ್ರ ನಡೆಸಲಾಗಿದೆ. ಆದ್ದರಿಂದ ಅಂತಹ ವ್ಯಕ್ತಿಗಳನ್ನು ಬರದಂತೆ ತಡೆಯಬೇಕೆಂದು ಮುಸ್ಲಿಂ ಮುಖಂಡರು ಸಭೆಯಲ್ಲಿ ಒತ್ತಾಯಿಸಿದರು.

ಬಕ್ರೀದ್ ಬಲಿದಾನದ ಸಂಕೇತವಾಗಿದೆ. ಕುರಿಗಳನ್ನು ಬಲಿ ಕೊಡುವ ಮೂಲಕ ಅದರ ಮಾಂಸಗಳನ್ನು ಧಾನವಾಗಿ ನೀಡಲಾಗುತ್ತದೆ. ಈ ವೇಳೆ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡರು. ಸೆ.1ರ ಶುಕ್ರವಾರ ಶಾಫಿ ಹಾಗೂ ಸೆ.2ರಂದು ಹನಫಿ ಪಂಗಡದವರಿಗೆ ಹಬ್ಬ ನಡೆಯಲಿದೆ. ಯಾವುದೇ ಮೆರವಣಿಗೆ ನಡೆಸುವುದಿಲ್ಲ. ಶಾಂತಿ ಸಮಾಧಾನದಿಂದ ಹಬ್ಬವನ್ನು ಆಚರಿಸಲಿದ್ದೇವೆ ಎಂದು ಮುಸ್ಲಿಂ ಮುಖಂಡರು ತಿಳಿಸಿದರು. 

ಈ ವೇಳೆ ಡಿವೈಎಸ್‍ಪಿ ಶೇಖ್ ಹುಸೇನ್ ಮಾತನಾಡಿ, ಶುಕ್ರವಾರದ ಬಕ್ರೀದ್ ಹಬ್ಬದಂದು ಅಡ್ಯಂತಾಯ ರಂಗಮಂದಿರದಲ್ಲಿ ನಡೆಯುವ ಗಣಪತಿ ಉತ್ಸವದಲ್ಲಿ ಕಲ್ಲಡ್ಕ ಪ್ರಭಾಕರ್‍ಭಟ್ ಬರುವ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗುವುದು. ಕೆಎಸ್‍ಆರ್‍ಪಿ ತುಕಡಿಯ ಸಹಿತ ಸುಮಾರು 200ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತಿಗೆ ನಿಯೋಜಿಸಲಾಗುವುದು. ಪಟ್ಟಣಕ್ಕೆ ಪ್ರವೇಶಿಸುವ ಸುತ್ತಮುತ್ತಲಿನ ಎಲ್ಲಾ ರಸ್ತೆಗಳಲ್ಲೂ ನಾಕಾಬಂದಿ ನಡೆಸಲಾಗುವುದು. 

ಜಿಲ್ಲೆಯ ಎಲ್ಲಾ 28 ಠಾಣೆಗಳಿಂದಲೂ ಸಿಸಿ ಟಿವಿ ಕ್ಯಾಮರ ತರಿಸಿಕೊಂಡು ಅಳವಡಿಸಲಾಗುವುದು. ಕಾನೂನು ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನ ಎಲ್ಲಾ ಪ್ರಾಥನಾ ಮಂದಿರಗಳಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು. ಪ್ರಚೋದನಕಾರಿ ಭಾಷಣ ಮಾಡದಂತೆ ಸಂಘಟಕರಿಗೆ ಸೂಚನೆ ನೀಡಲಾಗಿದೆ. ಅಂತಹ ಘಟನೆ ನಡೆದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

 ಈ ವೇಳೆ ಸಿಪಿಐ ಎಂ.ಜಗದೀಶ್, ಪಿಎಸ್ಸೈ ಎಂ.ರಫೀಕ್, ರಾಜ್ಯ ಬ್ಯಾರಿ ಅಕಾಡೆಮಿ ಸದಸ್ಯ ಕಿರುಗುಂದ ಅಬ್ಬಾಸ್, ಮಲೆನಾಡು ಮುಸ್ಲಿಂ ವೇದಿಕೆ ಅಧ್ಯಕ್ಷ ಸಿ.ಕೆ.ಇಬ್ರಾಹೀಂ, ಕಾರ್ಯಾಧ್ಯಕ್ಷ ಅಬ್ರಾರ್ ಬಿದರಹಳ್ಳಿ, ಕಾರ್ಯದರ್ಶಿ ಮಜೀದ್, ಮುಖಂಡರಾದ ಅಕ್ರಮ್ ಹಾಜಿ, ಎ.ಸಿ.ಅಯೂಬ್ ಹಾಜಿ, ಶಬ್ಬೀರ್ ಅಹ್ಮದ್, ಯಾಕೂಬ್ ಗೋಣಿಗದ್ದೆ, ಜಿಯಾಉಲ್ಲಾ, ಶರೀಫ್, ಇಬ್ರಾಹೀಂ ಯಾದ್‍ಗಾರ್, ವಾಜೀದ್, ಹಮೀದ್ ಹ್ಯಾಂಡ್‍ಪೂಸ್ಟ್, ಗ್ರಾಪಂ ಸದಸ್ಯ ಜುಬೇರ್, ಅಬೂಬಕರ್ ಮತ್ತಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News