ಶಿಕಾರಿಪುರ: ಬಿಜೆಪಿ ಕಾರ್ಯಕಾರಿ ಸಮಿತಿ ಸಭೆ
ಶಿಕಾರಿಪುರ,ಆ.30: ಭೀಕರ ಬರಗಾಲದಿಂದ ತತ್ತರಿಸಿರುವ ತಾಲೂಕಿನ ಪ್ರಮುಖ ಶಾಶ್ವತ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಮಂಜೂರಾತಿಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದು ರಾಜ್ಯ ಸರ್ಕಾರ ರಾಜಕಾರಣ ಮಾಡುತ್ತಿದ್ದು, ಇಂತಹ ಕ್ಷುಲ್ಲಕ ವರ್ತನೆಯನ್ನು ತಾಲೂಕಿನ ರೈತರು,ಜನತೆ ಕ್ಷಮಿಸುವುದಿಲ್ಲ ಎಂದು ಶಾಸಕ ಬಿ.ವೈ ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಪಟ್ಟಣದ ಮಾಳೇರಕೇರಿಯಲ್ಲಿನ ಪಕ್ಷದ ಕಚೇರಿಯಲ್ಲಿ ನಡೆದ ತಾಲೂಕು ಬಿಜೆಪಿ ಕಾರ್ಯಕಾರಣಿ ಸಭೆಯಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯ ಪಕ್ಷಗಳಿಗೆ ಸಾಮಾಜಿಕ ಹೊಣೆಗಾರಿಕೆಯಿದ್ದು, ಜನತೆಗೆ ನ್ಯಾಯ ದೊರಕಿಸಿದ ಬಗ್ಗೆ ಎಲ್ಲಾ ಪಕ್ಷಗಳಿಗೆ ಚುನಾವಣೆಯು ಆತ್ಮಾವಲೋಕನದ ಸಂದರ್ಬ ಎಂದ ಅವರು ಸಂಘಟನೆ ಮೂಲಕ ಶಕ್ತಿ ನೀಡಿ ಯಡಿಯೂರಪ್ಪನವರ ಹೋರಾಟಗಳನ್ನು ಬೆಂಬಲಿಸಿ ರಾಜ್ಯ ಮಟ್ಟದ ನಾಯಕರಾಗಿ ರೂಪಿಸಿದ ಹಿರಿಮೆ ಕಾರ್ಯಕರ್ತರು,ತಾಲೂಕಿನ ಜನತೆಗೆ ಸಲ್ಲಬೇಕು ಎಂದರು.
8 ಬಾರಿ ಶಾಸಕರಾಗಿ ವಿರೋಧಪಕ್ಷದಲ್ಲಿದ್ದ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ದೊರೆತ ಏಕೈಕ ಅವಕಾಶದಲ್ಲಿ ತಾಲೂಕು ಸರ್ವ ರೀತಿಯಲ್ಲಿ ಮಾದರಿಯಾಗಿಸುವ ದಿಸೆಯಲ್ಲಿ ಹೆಚ್ಚಿನ ಶ್ರಮವಹಿಸಿದ್ದು, ಇದರೊಂದಿಗೆ 4-5 ದಶಕ ರಾಜಕಾರಣದಲ್ಲಿ ಅಧಿಕಾರ ಅನುಭವಿಸಿದ ಪಕ್ಕದ ತಾಲೂಕಿನ ರಾಜಕಾರಣಿಯ ಕ್ಷೇತ್ರದ ಸ್ಥಿತಿ ಬಗ್ಗೆ ಜನತೆ ಅವಲೋಕಿಸಬೇಕಾಗಿದೆ ಎಂದ ಅವರು, ತಾಲೂಕಿನ ಪ್ರಮುಖ ನೀರಾವರಿ ಯೋಜನೆ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು ಪಾದಯಾತ್ರೆ, ಹೋರಾಟ, ಪ್ರತಿಭಟನೆ ಹಮ್ಮಿಕೊಂಡು ವರ್ಷ ಗತಿಸಿದರೂ ಇಂದಿಗೂ ಸರ್ಕಾರ ವಿಳಂಬ ಧೋರಣೆಯ ಮೂಲಕ ಕ್ಷುಲ್ಲಕ ರಾಜಕಾರಣದಲ್ಲಿ ಮಗ್ನವಾಗಿದೆ ಎಂದು ಅವರು ಆರೋಪಿಸಿದರು.
ಭೀಕರ ಬರಗಾಲದಿಂದ ತತ್ತರಿಸಿರುವ ತಾಲೂಕಿನ ಬಗ್ಗೆ ರಾಜ್ಯ ಸರ್ಕಾರ ಕಡೆಗಣಿಸಿರುವುದನ್ನು ಮನಗಂಡು ಯಡಿಯೂರಪ್ಪನವರು ಕೇಂದ್ರದ ಜಲಸಂಪನ್ಮೂಲ ಸಚಿವೆ ಉಮಾಭಾರತಿರವರನ್ನು ಬೇಟಿಯಾಗಿ ತಾಳಗುಂದ, ಉಡುಗಣಿ ಹೋಬಳಿಗೆ ಹಾವೇರಿಯ ಹೊಂಕಣದಿಂದ, ಹೊಸೂರು ಹೋಬಳಿಗೆ ಹೊನ್ನಾಳಿಯ ತುಂಗಭದ್ರಾ ನದಿಯಿಂದ,ಅಂಜನಾಪುರ ಜಲಾಶಯಕ್ಕೆ ಅರಕೆರೆಯಿಂದ ತುಂಗಾ ನೀರಿಗಾಗಿ ಪ್ರತ್ಯೇಕ ಪೈಪ್‌ಲೈನ್,ಕಸಬಾ ಹೋಬಳಿಗೆ ಮುಡುಬಸಿದ್ದಾಪುರ ಬಳಿಯ ಕಲ್ಲುಒಡ್ಡು ಪಿಕ್ ಅಪ್ ಡ್ಯಾಂ ಹಾಗೂ ಸೊರಬ ತಾಲೂಕಿಗೆ ಮೂಡಿ ಬಳಿ ಏತ ನೀರಾವರಿ ಯೋಜನೆಗೆ ಮನವಿ ಸಲ್ಲಿಸಿದ ಪರಿಣಾಮ 1200 ಕೋಟಿ ವೆಚ್ಚದ ಯೋಜನೆಯ ತುರ್ತು ಅನುಷ್ಠಾನಕ್ಕಾಗಿ ಗುರುವಾರ ಕೇಂದ್ರ ನೀರಾವರಿ ನಿಗಮದ ಮುಖ್ಯ ಅಭಿಯಂತರ ಆರ್.ಕೆ ಜೈನ್ ಹಾಗೂ ರಾಜ್ಯ ನೀರಾವರಿ ನಿಗಮದ ಕುಲಕರ್ಣಿ ಯೋಜನಾ ವರದಿ ಸಿದ್ದಪಡಿಸಲು ಧಾವಿಸುತ್ತಿದ್ದಾರೆ ಎಂದು ತಿಳಿಸಿ ತಾಲೂಕಿನ ಜನತೆ ಪರವಾಗಿ ಸಚಿವರನ್ನು ಅಭಿನಂದಿಸಿದರು.
ಕೇಂದ್ರ ಸರ್ಕಾರ ಜೆನರಿಕ್ ಔಷಧ ಕೇಂದ್ರ, ಸುಕನ್ಯಾ ಯೋಜನೆ, ಉಚಿತ ಸಿಲಿಂಡರ್ ಜತೆಗೆ ಜಾರಿಗೊಳಿಸಿದ ನೂರಾರು ಯೋಜನೆಯ ಬಗ್ಗೆ ಕಾರ್ಯಕರ್ತರು ಮನವರಿಕೆ ಮಾಡಿಕೊಡಲು ತಿಳಿಸಿದ ಅವರು ಮುಖ್ಯಮಂತ್ರಿಗಳ ವಿರುದ್ಧ 25 ಕ್ಕೂ ಅಧಿಕ ದೂರುಗಳಿದ್ದರೂ ದಾಖಲಿಸದೆ ಎಸಿಬಿ ಯಡಿಯೂರಪ್ಪನವರ ವಿರುದ್ಧ ಕ್ಷಣಮಾತ್ರದಲ್ಲಿ ದೂರು ದಾಖಲಿಸುವ ಷಡ್ಯಂತ್ರ ರೂಪಿಸಲಾಗಿದ್ದು ಎಲ್ಲಾ ದೂರುಗಳಿಂದ ಮುಕ್ತರಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಅಭಿವೃದ್ಧಿಯಲ್ಲಿ ತಾಲೂಕಿನ ಜನತೆಗೆ ನ್ಯಾಯ ದೊರಕಿಸಲು ಹೆಚ್ಚು ಶ್ರಮಿಸಲಾಗಿದೆ ಎಂದ ಅವರು, ಈ ಬಾರಿಯ ಚುನಾವಣೆಯಲ್ಲಿ ಹಣ ಹೆಂಡದ ಆಮಿಷ ವಿಪರೀತವಾಗಲಿದ್ದು ಕಾರ್ಯಕರ್ತರು ಮತದಾರರ ಪ್ರೀತಿ ವಿಶ್ವಾಸಗಳಿಸಿ ಸಂಘಟನೆಗೆ ಶಕ್ತಿಯನ್ನು ತುಂಬುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾ.ಬಿಜೆಪಿ ಅಧ್ಯಕ್ಷ ರೇವಣಪ್ಪ ಮಾತನಾಡಿದರು. ಮುಖಂಡ ಗುರುಮೂರ್ತಿ, ಕೆ.ಶೇಖರಪ್ಪ, ಪದ್ದಣ್ಣ, ಅಗಡಿ ಅಶೋಕ, ಹಾಲಪ್ಪ, ಕಬಾಡಿ ರಾಜು,ಟಿ.ಎಸ್ ಮೋಹನ, ಚಾರ್ಗಲ್ಲಿ ಪರಶುರಾಮ, ನಿವೇದಿತಾ, ಗಾಯತ್ರಿದೇವಿ, ಶುಭರಘು, ಸವಿತಾ ಬಾಯಿ ತಾಪಂ, ಜಿಪಂ ಸದಸ್ಯರು ಉಪಸ್ಥಿತರಿದ್ದರು.