ಸೆ.2 ರಂದು ಕೃಷಿ, ಸಹಕಾರ ಸಾಹಿತ್ಯ ಸಮಾವೇಶ
ಶಿಡ್ಲಘಟ್ಟ, ಆ.30: ಸೆಪ್ಟೆಂಬರ್ 2 ರಂದು ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಸಹಯೋಗದಲ್ಲಿ ಕೃಷಿ ಮತ್ತು ಸಹಕಾರ ಸಾಹಿತ್ಯ ಸಮಾವೇಶ ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೈವಾರ ಶ್ರೀನಿವಾಸ್ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತು ಕೇವಲ ಕನ್ನಡ ಭಾಷಾಭಿವೃದ್ಧಿ ಕಾರ್ಯಕ್ರಮಗಳಿಗಷ್ಟೆ ಸೀಮಿತವಾಗದೆ, ಈ ಭಾಗದಲ್ಲಿನ ಜ್ವಲಂತ ಸಮಸ್ಯೆಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟಗಳಲ್ಲಿ ಭಾಗವಹಿಸುವುದರ ಜತೆಗೆ, ರೈತರಿಗೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟನಲ್ಲಿ ಸಮಾವೇಶದ ಮೂಲಕ ಮಾಹಿತಿ ಒದಗಿಸಿಕೊಡುವ ಕಾರ್ಯವನ್ನು ಮಾಡಲಾಗುತ್ತಿದೆ.
ಸಮಾವೇಶದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಶೇ .100 ರಷ್ಟು ಅಂಕಗಳನ್ನು ಗಳಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಕಾರ್ಯಕ್ರಮ ನಡೆಯಲಿದೆ. ಅಂತಹ ವಿದ್ಯಾರ್ಥಿಗಳು, ಆಯಾ ತಾಲೂಕುಗಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಅಥವಾ ಶಿಡ್ಲಘಟ್ಟ ತಾಲ್ಲೂಕಿನ ಅಧ್ಯಕ್ಷರನ್ನು ಸಂಪರ್ಕ ಮಾಡಿ ಹೆಸರುಗಳು ನೋಂದಾವಣೆ ಮಾಡಿಕೊಳ್ಳಬಹುದಾಗಿದೆ ಎಂದರು.
ತಾಲೂಕು ಅಧ್ಯಕ್ಷ ಕೆ.ಮಂಜುನಾಥ್, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಮಂಚನಬೆಲೆ ಶ್ರೀನಿವಾಸ್, ವಿನಾಯಕ, ಎಸ್.ವಿ.ನಾಗರಾಜರಾವ್ ಮುಂತಾದವರು ಹಾಜರಿದ್ದರು.