ಶಿವಮೊಗ್ಗ: ಗಣೇಶ ವಿಗ್ರಹ ವಿಸರ್ಜನಾ ವೇಳೆ ಡಿಜೆ, ಧ್ವನಿ ವರ್ಧಕ ನಿಷೇಧಕ್ಕೆ ಜಿಲ್ಲಾಡಳಿತ ಸೂಚನೆ
ಶಿವಮೊಗ್ಗ, ಆ. 30: ಗಣೇಶ ಚತುರ್ಥಿ ಅಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನಂತರ ವಿಸರ್ಜನಾ ಮೆರವಣಿಗೆ ವೇಳೆ ಮಾರ್ಗದಲ್ಲಿ ಮೆರವಣಿಗೆ ನಿಲ್ಲಿಸಿ ಅನವಶ್ಯಕವಾಗಿ ವಿಳಂಬ ಮಾಡುತ್ತಿದ್ದು, ಇದರಿಂದಾಗಿ ಸಂಚಾರದಲ್ಲಿ ಅಡಚಣೆ ಉಂಟಾಗುತ್ತಿದೆ ಎಂಬುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.
ಗಣಪತಿ ವಿಸರ್ಜನಾ ವೇಳೆ ಮೆರವಣಿಗೆಯಲ್ಲಿ ಡಿ.ಜೆ. ಅಥವಾ ಧ್ವನಿವರ್ಧಕ ಉಪಯೋಗಿಸುವುದರಿಂದ ಸಾರ್ವಜನಿಕರಿಗೆ, ವಯಸ್ಕರಿಗೆ, ರೋಗಿಗಳಿಗೆ ತೊಂದರೆ ಆಗುತ್ತಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂದರ್ಭ ಎದುರಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಹಿತದೃಷ್ಠಿಯಿಂದ ಶಾಂತಿಪಾಲನೆ ಮತ್ತು ಗಣಪತಿ ವಿಸರ್ಜನಾ ಮೆರವಣಿಗೆಗಳು ನಿಗದಿತ ಸಮಯದೊಳಗೆ ಮುಕ್ತಾಯಗೊಳ್ಳುವ ಸಲುವಾಗಿ ಹರಾಜು ಪ್ರಕ್ರಿಯೆ, ಡಿಜೆ ಮತ್ತು ಮೈಕ್‍ಸಿಸ್ಟಮ್ ಬಳಕೆ ನಿಷೇಧಿಸಬೇಕು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಬೆಳಿಗ್ಗೆ 7ರಿಂದ ರಾತ್ರಿ ವೇಳೆಗೆ ಮೆರವಣಿಗೆ ಮುಕ್ತಾಯಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.