×
Ad

ಅಕ್ರಮ ವೇಶ್ಯಾವಾಟಿಕೆ ದಂಧೆ: 12 ಆರೋಪಿಗಳ ಬಂಧನ; ಇಬ್ಬರು ಪೇದೆಗಳ ಅಮಾನತ್ತು

Update: 2017-08-30 21:38 IST

ಚಿಕ್ಕಮಗಳೂರು, ಆ.30: ನಗರದ ಕಾಳಿದಾಸನಗರ ಮತ್ತು ಅರವಿಂದ ನಗರ ಬಡಾವಣೆಗಳಲ್ಲಿ ವೇಶ್ಯಾವಟಿಕೆ ಅಡ್ಡೆಗಳ ಮೇಲೆ ದಿಢೀರ್ ದಾಳಿ ನಡೆಸಿದ ಡಿಸಿಐಬಿ ಪೊಲೀಸರು ಮೂರು ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಹಲವರನ್ನು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತ್ತುಪಡಿಸಲಾಗಿದೆ.

ಮೂರು ಪ್ರಕರಣಗಳಲ್ಲಿ ಒಟ್ಟು 4 ಮಂದಿ ಪುರುಷರು, 4 ಮಂದಿ ಮಹಿಳೆಯರು ಮತ್ತು 2 ಮಂದಿ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಪ್ರಕರಣಗಳು ದಾಖಲಿಸಲಾಗಿದೆ. ಆರೋಪಿಗಳಿಂದ ಒಟ್ಟು ರೂ. 2,850 ನಗದು ಮತ್ತು 12 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. 3 ಜನ ಮಹಿಳೆಯರನ್ನು ವೇಶ್ಯಾವಾಟಿಕೆಯಿಂದ ಪಾರುಮಾಡಲಾಗಿದೆ. ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕರ್ತವ್ಯ ಲೋಪ ಎಸಗಿರುವ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಎಸ್ಪಿ ಕಚೇರಿ ಪ್ರಕಟನೆ ತಿಳಿಸಿದೆ.

ನಗರದ ಕಾಳಿದಾಸನಗರ ಬಡಾವಣೆಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಓರ್ವ ಮಹಿಳೆ ಸೇರಿದಂತೆ ಇತರೇ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಜಾನ್ ಮೆಲ್ವಿನ್ ಡಯಾಸ್(47), ಪನೀತ್(18), ಹಾರೂನ್(23) ಮತ್ತು ರಮೇಶ(45) ಎಂಬ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ 500 ರೂ.ಗಳ ನಗದು ಸಹಿತ 6 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಅಕ್ರಮ ದಂಧೆಯನ್ನು ಗೊತ್ತಿದ್ದೂ ಮುಂದುವರೆಯಲು ಬಿಟ್ಟಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದಾಳಿಯ ವೇಳೆ ಓರ್ವ ಮಹಿಳೆಯನ್ನು ವೇಶ್ಯಾವಾಟಿಕೆಯಿಂದ ಪಾರುಮಾಡಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಅರವಿಂದನಗರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮಧು (31) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ. 1,250 ನಗದು ಮತ್ತು 4 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಳಾಗಿದೆ. ದಾಳಿಯಲ್ಲಿ ಓರ್ವ ಹೆಂಗಸನ್ನು ವೇಶ್ಯಾವಾಟಿಕೆಯಿಂದ ಪಾರುಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಶ್ರೀಲೇಖಾ ಟಾಕೀಸ್ ಹತ್ತಿರ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಚಂದ್ರೇಗೌಡ(40) ಮತ್ತು ಓರ್ವ ಮಹಿಳೆಯನ್ನು ಬಂಧಿಸಲಾಗಿದೆ. ಆರೋಪಿಗಳಿಂದ ರೂ. 1,100  ನಗದು ಮತ್ತು 2 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಓರ್ವ ಹೆಂಗಸನ್ನು ವೇಶ್ಯಾವಾಟಿಕೆಯಿಂದ ಪಾರುಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News