ಜಿಲ್ಲಾ ಯೋಜನಾ ಸಮಿತಿಗೆ ನೂತನ ಅಧ್ಯಕ್ಷರಾಗಿ ರಾಮಲಿಂಗಾರೆಡ್ಡಿ ಆಯ್ಕೆ
ಚಿಕ್ಕಬಳ್ಳಾಪುರ, ಆ.30: ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಯೋಜನೆಗಳನ್ನು ಸಿದ್ಧಡಿಸುವ ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವಿರೋಧ ಆಯ್ಕೆಯಾದರು.
ಜಿಲ್ಲಾಡಳಿತ ಜಿಪಂ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ನೇತೃತ್ವದಲ್ಲಿ ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಏಕಮಾತ್ರ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಸೂಚಕರಾಗಿ ಜಿಪಂ ಅಧ್ಯಕ್ಷ ಕೇಶವರೆಡ್ಡಿ ಸಹಿ ಮಾಡಿದ್ದರು. ಈ ನಿಟ್ಟಿನಲ್ಲಿ ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಘೋಷಿಸಿದರು.
ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳಿದ್ದಲ್ಲಿ ಸಮಿತಿ ಸದಸ್ಯರು ತಮ್ಮ ಗಮನಕ್ಕೆ ತರಬಹುದೆಂದರು. ಅಲ್ಲದೆ ಜಿಲ್ಲಾ ಯೋಜನಾ ಸಮಿತಿ ಜಿಲ್ಲೆಯ ಅಭಿವೃದ್ದಿ ದೃಷ್ಠಿಕೋನದಿಂದ ಬಹಳ ಮಹತ್ವದಾಗಿದ್ದು, ಸಮಿತಿಯ ನಿಯಮಾವಳಿಗಳಂತೆ ಮೂರು ತಿಂಗಳಗೊಮ್ಮೆ ಸಭೆ ಆಯೋಜಿಸುವಂತೆ ಜಿಪಂ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಚಿಂತಾಮಣಿ ಶಾಸಕ ಜೆಕೆ ಕೃಷ್ಣಾರೆಡ್ಡಿ, ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಜಿಪಂ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ, ಜಿಪಂ ಉಪಕಾರ್ಯದರ್ಶಿ ಸಿ. ಸಿದ್ದರಾಮಯ್ಯ, ಮುಖ್ಯ ಲೆಕ್ಕಾಧೀಕ್ಷಕ ಡಾ. ನಾಗೇಶ್, ಜಿಪಂ ಸದಸ್ಯರಾದ ಕೆ.ಸಿ. ರಾಜಾಕಾಂತ್, ಕೆ.ಎಂ. ಮುನೇಗೌಡ ಸೇರಿದಂತೆ ಜಿಲ್ಲಾ ಯೋಜನಾ ಸಮಿತಿ ಸದಸ್ಯರು, ಸಮಿತಿಯ ನಾಮನಿರ್ದೇಶಿತ ಸದಸ್ಯರು ಮತ್ತಿತರರಿದ್ದರು.