×
Ad

ಕಲಿಯುವ ಹಂತವನ್ನು ಅಲಕ್ಷಿಸದೇ ಸುಶಿಕ್ಷಿತರಾಗಿ: ಪ್ರೊ.ಮಲ್ಲಿಕಾರ್ಜುನ ಹಲಸಂಗಿ

Update: 2017-08-30 23:10 IST

ದಾವಣಗೆರೆ, ಆ.30: ಶಿಕ್ಷಣ, ಅರಿವು ಮತ್ತು ಜ್ಞಾನ ಮಾತ್ರ ಯುವಜನತೆಯ ಕೈಹಿಡಿದು ನಡೆಸಬಲ್ಲದು. ಕಲಿಯುವ ಹಂತವನ್ನು ಯಾವುದೇ ಕಾರಣಕ್ಕೆ ಅಲಕ್ಷಿಸದೆ, ಉತ್ಸಾಹ ಮತ್ತು ಸಕಾರಾತ್ಮಕ ಭಾವನೆಯಿಂದ ಸುಶಿಕ್ಷಿತರಾಗಬೇಕೆಂದು ಉಪನ್ಯಾಸಕ ಪ್ರೊ. ಮಲ್ಲಿಕಾರ್ಜುನ ಹಲಸಂಗಿ ಹೇಳಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಡಾ.ಸಿ.ವಿ ರಾಮನ್ ಕಾಲೇಜು ಆಶ್ರಯದಲ್ಲಿ ಬುಧವಾರ ನಗರದ ಡಾ.ಸಿ.ವಿ ರಾಮನ್ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಯುವ ದಿನಾಚರಣೆ  ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. 

ವಿದ್ಯಾರ್ಥಿ ಜೀವನ ಒಂದು ನಿರ್ಣಾಯಕ ಹಂತ. ಯುವ ಶಕ್ತಿಯೇ ರಾಷ್ಟ್ರ ಶಕ್ತಿಯಾಗಿದ್ದು, ಸುಂದರ, ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಣದ ಪಾತ್ರ ಬಹಳ ಮುಖ್ಯವಾಗಿದೆ. ಆದರೆ ಇಂದಿನ ಶಿಕ್ಷಣದಿಂದ ಕೌಶಲ್ಯಗಳು ಕರಗತವಾಗುತ್ತಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಶಾಂತಿಯ ನಿರೀಕ್ಷೆ ದೊಡ್ಡ ಸವಲಾಗಿದೆ. ಶಾಂತಿ ಮರೀಚಿಕೆಯಾಗಿದೆ. ವ್ಯವಸ್ಥೆ ನಮ್ಮನ್ನು ದುರ್ಬಲಗೊಳಿಸುತ್ತಿದೆ ಎಂದರು.  

ನಮ್ಮ ದೇಶದಲ್ಲಿ 70 ಕೋಟಿ ಯುವಕರಿದ್ದು ಶೇ. 10 ರಷ್ಟು ಮಾತ್ರ ಕೌಶಲ್ಯಾತ್ಮಕ ಯುವಕರಿದ್ದು ಶೇ. 90 ರಲ್ಲಿ ಕೌಶಲ್ಯವಿಲ್ಲ. ನಮ್ಮ ವ್ಯವಸ್ಥೆ ಭ್ರಮೆಯನ್ನು ಬಿತ್ತುತ್ತಿದೆ. ಭ್ರಮೆಯನ್ನೇ ವಾಸ್ತವವಾಗಿಸುತ್ತಿದೆ. ಒಂದು ಹೆಣ್ಣು ಮಗು ನಿರ್ಭೀತವಾಗಿ ಇಂದಿಗೂ ಓಡಾಡಲು ಸಾಧ್ಯವಾಗದ ಅಭದ್ರತೆ ಇದೆ. ಆರ್ಥಿಕ ಬಿಕ್ಕಟ್ಟಿದೆ. ಇದಕ್ಕೆಲ್ಲ ಮುಖ್ಯ ಕಾರಣ ಗುಣಮಟ್ಟ ಶಿಕ್ಷಣದ ಕೊರತೆ. ಸಮಾಜ ಶಿಕ್ಷಣವನ್ನು ನಿಯಂತ್ರಿಸಬಾರದು. ಬದಲಾಗಿ ಶಿಕ್ಷಣ ಸಮಾಜವನ್ನು ನಿಯಂತ್ರಿಸುವಂತಿರಬೇಕು. ಸ್ವತಂತ್ರವಾಗಿ ಆಲೋಚಿಸಲು ಅವಕಾಶವೀಯುವ ಶಿಕ್ಷಣದ ಅವಶ್ಯಕತೆ ಎಂದು ಹೇಳಿದರು.

ಶಿಕ್ಷಣ ನಾಲ್ಕು ಮುಖ್ಯ ಅಂಶಗಳಾದ ಕೇಳುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದನ್ನು ಒಳಗೊಳ್ಳಬೇಕು. ವಿದ್ಯಾರ್ಥಿಗಳೂ ಕೂಡ ಕಲಿಯುವ ಹಂತವನ್ನು ಅಲಕ್ಷಿಸದೇ, ಸಕಾರಾತ್ಮಕ ಭಾವನೆಗಳನ್ನು ಹೊಂದಿ ನಿಮ್ಮ ಜೀವನದ ಶಿಲ್ಪಿ ನೀವೇ ಆಗಬೇಕೆಂದು ಕರೆ ನೀಡಿದರು.

ಈ ವೇಳೆ ಆಗಸ್ಟ್ 19 ರಂದು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಯುವ ದಿನಾಚರಣೆ ಕುರಿತು ಏರ್ಪಡಿಸಲಾಗಿದ್ದ ಪ್ರಬಂಧ ಮತ್ತು ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಡಾ. ಜಿ.ಡಿ ರಾಘವನ್, ಗಂಗಾಧರಯ್ಯ ಕಾಲೇಜಿನ ವಿದ್ಯಾರ್ಥಿನಿ ರೇಖಾ ಎಸ್. ಕೆ .ಮತ್ತು ಅಣ್ಣೇಶ್ ಯುವ ಸಂಪತ್ತಿನ ಕುರಿತು ಮಾತನಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News