ಅಲೆಮಾರಿ ಜನಾಂಗದವರಿಗೆ ನಿವೇಶನ, ಮನೆ ಒದಗಿಸಲು ಒತ್ತಾಯ
ಚಿಕ್ಕಮಗಳೂರು, ಆ.30: ಕಳೆದ ಎರಡು ದಶಕಗಳಿಂದ ನಗರದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದ ಕುಟುಂಬಗಳಿಗೆ ನಿವೇಶನ ಮತ್ತು ಮನೆ ಒದಗಿಸಿ ಕೊಡುವಂತೆ ದಸಂಸ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಅಲೆಮಾರಿ ಕುಟುಂಬಗಳೊಂದಿಗೆ ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರನ್ನು ಬುಧವಾರ ಭೇಟಿ ಮಾಡಿದ ಸಮಿತಿಯ ವಿಭಾಗೀಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಈ ಸಂಬಂಧ ಮನವಿ ಸಲ್ಲಿಸಿದರು.
ಅಲೆಮಾರಿ ಜನಾಂಗದ 15 ಕುಟುಂಬಗಳು ಕಳೆದ 20 ವರ್ಷಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿ ತಾತ್ಕಾಲಿಕ ಡೇರೆಗಳನ್ನು ಹಾಕಿಕೊಂಡು ಮಳೆ, ಗಾಳಿ ಮತ್ತು ಬಿಸಿಲಿನ ನಡುವೆ ವಾಸಿಸುತ್ತಿದ್ದಾರೆ, ಅತ್ಯಂತ ಕಡುಬಡತನದಲ್ಲಿರುವ ಈ ಕುಟುಂಬಗಳಿಗೆ ಸ್ವಂತ ನಿವೇಶನ ಅಥವಾ ಮನೆ ನಿರ್ಮಿಸಿಕೊಳ್ಳಲು ಶಕ್ತಿ ಇಲ್ಲ ಎಂದು ಹೇಳಿದರು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಜಿ.ಸತ್ಯವತಿ, ಕಂದಾಯ ನಿರೀಕ್ಷಕ ಸತ್ಯನಾರಾಯಣ ಅವರಿಗೆ ಅಲೆಮಾರಿ ಕುಟುಂಬಗಳು ವಾಸಿಸುತ್ತಿರುವ ಸ್ಥಳವನ್ನು ಪರಿಶೀಲಿಸಿ ತಮಗೆ ವರದಿ ನೀಡುವಂತೆ ಸೂಚಿಸಿದ ಅವರು, ಕಡೂರು ತಾಲೂಕು ಕಾಮನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಶಿಕ್ಷಕರ ಕೊರತೆಯನ್ನು ತುಂಬುವಂತೆ ಮಾಡಿದ ಮನವಿಗೆ ಪ್ರತಿಕ್ರಿಯಿಸಿ ಕಡೂರು ತಹಸೀಲ್ದಾರ್‍ರವರಿಗೆ ಕೂಡಲೇ ಶಾಲೆಗೆ ಭೇಟಿ ನೀಡಿ ಸಮಸ್ಯೆ ಬಗ್ಗೆ ವರದಿ ನೀಡುವಂತೆ ಆದೇಶಿಸಿದರು.
ಈ ವೇಳೆ ತರೀಕೆರೆ ತಾಲೂಕಿನ ಮಿರಳೇನಹಳ್ಳಿಯಲ್ಲಿ ಕಳೆದ 50 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ದಲಿತ ಕುಟುಂಬಗಳಿಗೆ ಖಾಯಂ ಸಾಗುವಳಿ ಚೀಟಿ ನೀಡಬೇಕು, ದೋರನಾಳು ಗ್ರಾಮದ ಗೋಮಾಳದಲ್ಲಿ ಸಾಗುವಳಿ ಮಾಡುತ್ತಿರುವ ದಲಿತರಿಗೆ ಭೂ ಮಂಜೂರಾತಿ ಮಾಡಬೇಕು ಎಂದು ಮನವಿ ಸಲ್ಲಿಸಲಾಯಿತು.
ಅಲೆಮಾರಿ ಜನಾಂಗದ ಓಂಕಾರಮೂರ್ತಿ, ಶಿವ, ಪರಶುರಾಮ, ನಾಗರಾಜ, ಪಿಲಾಕಮ್ಮ, ರೇಣುಕಮ್ಮ, ಚಿನ್ನಮ್ಮ ಹಾಜರಿದ್ದರು.