ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟದ ಮೇಲೆ ದಾಳಿ: 20 ಸಾವಿರ ರೂ.ದಂಡ ವಸೂಲಿ
ಚಿಕ್ಕಮಗಳೂರು, ಆ.31: ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟಕ್ಕೆ ಅಂತ್ಯ ಕಾಣಿಸಲು ನಿರ್ಧರಿಸಿರುವ ನಗರಸಭೆ ಆಯುಕ್ತೆ ಶ್ರೀಮತಿ ತುಷಾರಮಣಿ ಸಂತೆ ದಿನವಾದ ನಿನ್ನೆ ಅಂಗಡಿಗಳ ಮೇಲೆ ದಾಳಿ ನಡೆಸಿ 150 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಲ್ಲದೇ 20 ಸಾವಿರ ರೂ. ದಂಡ ವಿಧಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಕೆ.ಎಂ. ರಸ್ತೆಯಲ್ಲಿರುವ ಕೆಂಚಾಂಬ ಟ್ರೇಡರ್ಸ್ ಮೇಲೆ ದಾಳಿ ನಡೆಸಿದ್ದಲ್ಲದೇ ಅಂಗಡಿ ಮಾಲಕ ಪ್ರಕಾಶ್ ತನ್ನ ಮಾರುತಿ ಕಾರಿನಲ್ಲಿ ಈ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಇಟ್ಟು ಅಲ್ಲಿಂದಲೇ ಮಾರಾಟ ಮಾಡುತ್ತಿದ್ದುದು ಪತ್ತೆಹಚ್ಚಿ 10 ಕೆ.ಜಿ. ಪ್ಲಾಸ್ಟಿಕ್ ಹಾಗೂ ಮಾರುತಿ ಓಮ್ನಿ ವ್ಯಾನನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕರಿಗೆ 20 ಸಾವಿರ ರೂ. ದಂಡ ವಿಧಿಸಿದ್ದಾರೆ.
ಇದೇ ಅಂಗಡಿಯ ಮೇಲೆ ಕಳೆದ ಕೆಲ ದಿನಗಳ ಹಿಂದೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಲ್ಲದೇ 5 ಸಾವಿರ ರೂ. ದಂಡ ವಿಧಿಸಿ ಎಚ್ಚರಿಸಿದ್ದರೂ ಪುನಃ ಅಂಗಡಿ ಮಾಲೀಕರು ಲಾಭದ ಆಸೆಯಿಂದ ವ್ಯಾನ್‍ನಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಇಟ್ಟು ಮಾರಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದ್ದು, ಇಂದು ಕಡೆಯ ಎಚ್ಚರಿಕೆ ನೀಡಿದ್ದಾರೆ.
ಅದೇ ರೀತಿ ಬಾರ್‍ಲೈನ್ ರಸ್ತೆಯ ಅಂಗಡಿಯೊಂದರ ಮೇಲೆ ದಾಳಿ ನಡೆಸಿ 150 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ.
ಆಯುಕ್ತರು ನಗರಸಭೆಗೆ ಬಂದ ನಂತರ ಕೆಲ ದಿನಗಳಲ್ಲೇ ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಲು ಮುಂದಾಗಿ ಬೆಂಗಳೂರು ಮತ್ತಿತರೆಡೆಯಿಂದ ಸ್ಥಳೀಯ ಅಂಗಡಿ ಮಾಲೀಕರುಗಳು ಟ್ರಾನ್ಸ್‍ಪೋರ್ಟ್‍ಗಳ ಮೂಲಕ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ತರಿಸಿದ್ದಾರೆ. ಅದನ್ನು ದಾಳಿ ನಡೆಸಿ 5 ಲಕ್ಷ ರೂ.ಗಳಿಗೂ ಹೆಚ್ಚು ವಸ್ತುಗಳನ್ನು ವಶಪಡಿಸಿಕೊಂಡಿದ್ದರು.
ವಶಪಡಿಸಿಕೊಂಡಿರುವ ಸುಮಾರು 700 ಕೆ.ಜಿ.ಯಷ್ಟು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ನಗರಸಭೆಯಲ್ಲಿ ಶೇಖರಿಸಿ ಅದು ಪುನಃ ಬಳಕೆಗೆ ಬಾರದಂತೆ ನಾಶಪಡಿಸಲು 8-10 ಕಾರ್ಮಿಕರನ್ನು ಬಿಟ್ಟು ಅದನ್ನು ತುಂಡರಿಸಿ ತ್ಯಾಜ್ಯವಸ್ತುವನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಿಂದೆಲ್ಲಾ ನಗರಸಭೆಯಿಂದ ಸಿಬ್ಬಂದಿಗಳು ಅಂಗಡಿಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಮಾರಾಟದ ವಸ್ತುಗಳನ್ನು ವಶಪಡಿಸಿಕೊಂಡು ಬಂದು ನಗರಸಭೆಯಲ್ಲಿ ತಂದಿಟ್ಟರೂ ಅದು ಪುನಃ ವಾಪಸ್ ಆಯಾ ಅಂಗಡಿಗಳಿಗೇ ಅಥವಾ ಇನ್ಯಾರಿಗೂ ತಲುಪುತ್ತಿತ್ತೆಂಬ ಆರೋಪಗಳು ಕೇಳಿಬರುತ್ತಿತ್ತು. ಅದಕ್ಕೆಲ್ಲಾ ಇತಿಶ್ರೀ ಹಾಡಿರುವ ಆಯುಕ್ತೆ ತುಷಾರಮಣಿಯವರ ಕಟ್ಟುನಿಟ್ಟಿನ ಕ್ರಮದಿಂದ ವಶಪಡಿಸಿಕೊಂಡ ಪ್ಲಾಸ್ಟಿಕ್ ವಸ್ತುಗಳು ನಾಶವಾಗುತ್ತಿವೆ.
‘ನಿಷೇಧಿತ ಪ್ಲಾಸ್ಟಿಕ್ ಮಾರಾಟಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ದಾಳಿ ನಿರಂತರವಾಗಿ ನಡೆಯುತ್ತಿರುತ್ತದೆ. ವ್ಯಾಪಾರಸ್ತರು ಇನ್ನಾದರೂ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟವನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಅಂತಹ ಅಂಗಡಿಗಳ ಪರವಾನಗಿಯನ್ನು ಸಹ ರದ್ದುಪಡಿಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಅವರು ಇಂತಹ ಪರಿಸ್ಥಿರಿಯನ್ನು ವ್ಯಾಪಾರಸ್ತರು ಬರಮಾಡಿಕೊಳ್ಳಬಾರದು’.
ತುಷಾರ ರಾಣಿ, ಆಯುಕ್ತೆ, ನಗರಸಭೆ.