ಬೆಳೆಗಾರರು ತೋಟ ನಿರ್ವಹಣೆಗೆ ಹೆಚ್ಚು ಮುತುವರ್ಜಿ ವಹಿಸಬೇಕು: ಡಾ. ಎಚ್.ನಾರಾಯಣಸ್ವಾಮಿ
ಸಾಗರ, ಆ.31: ಮಳೆ ಬಿಸಿಲು ವಾತಾವರಣದಿಂದ ಅಡಿಕೆ ತೋಟಗಳಿಗೆ ಬೇರೆ ಬೇರೆ ರೀತಿಯ ರೋಗಗಳು ಬರುವ ಸಾಧ್ಯತೆ ಇರುವುದರಿಂದ ಬೆಳೆಗಾರರು ತೋಟ ನಿರ್ವಹಣೆಗೆ ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಶಿವಮೊಗ್ಗ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಎಚ್.ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ತಾಳಗುಪ್ಪ ಹೋಬಳಿಯ ಹಂಸಗಾರು, ಮರಡುಮನೆ, ಸಸರವಳ್ಳಿ ಸೇರಿದಂತೆ ವಿವಿಧ ಅಡಿಕೆ ತೋಟಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಹೊಸಹಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಾಲೂಕಿನ ಹಂಸಗಾರು ಹಾಗೂ ಹೊಸಹಳ್ಳಿ ಭಾಗದಲ್ಲಿ ಅಡಿಕೆಗೆ ಎಲೆಚುಕ್ಕಿ ರೋಗ ಬಂದು, ಸೋಗೆಗಳು ಹಳದಿಯಾಗುತ್ತಿರುವುದು ಪತ್ತೆಯಾಗಿದೆ ಎಂದು ಹೇಳಿದರು.
ಎಲೆಚುಕ್ಕಿ ರೋಗದಿಂದ ಮರಗಳ ಆಹಾರ ಉತ್ಪಾದನೆ ಸಾಮರ್ಥ್ಯ ಕಡಿಮೆಯಾಗುತ್ತದೆ. ಅಡಿಕೆ ಮರಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಸುಮಾರು ಶೇ. 40ರಷ್ಟು ಬೆಳೆ ನಾಶವಾಗುವ ಸಾಧ್ಯತೆ ಇರುವುದರಿಂದ ಬೆಳೆಗಾರರು ತೋಟಗಳಲ್ಲಿ ಹಳದಿಯಾಗಿರುವ ಸೋಗೆಗಳನ್ನು ತೆಗೆದು ಸ್ವಚ್ಚಗೊಳಿಸಬೇಕು. ಎಲೆಗಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ರೋಗ ನಿಯಂತ್ರಣಕ್ಕಾಗಿ ಇರುವ ವೈಜ್ಞಾನಿಕ ವಿಧಾನವನ್ನು ಅನುಸರಿಸಬೇಕು ಎಂದು ತಿಳಿಸಿದರು.
ಮಳೆಬಿಸಿಲು ಇರುವುದರಿಂದ ತೋಟಗಳಿಗೆ ಕೊಳೆರೋಗ ಜಾಸ್ತಿಯಾಗಿದೆ. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಮಳೆ ಕೊರತೆಯಾಗಿದ್ದು, ಆಗಸ್ಟ್ ತಿಂಗಳಿನಲ್ಲಿ ಮಳೆ ಪ್ರಮಾಣ ಹೆಚ್ಚಿದೆ. ಮಳೆ ಜೊತೆಗೆ ವಿಪರೀತ ಬಿಸಿಲು ಬೀಳುತ್ತಿರುವುದರಿಂದ ತಾಲ್ಲೂಕಿನಾದ್ಯಂತ ಅನೇಕ ತೋಟಗಳಲ್ಲಿ ಕೊಳೆರೋಗ ಕಾಡುವ ಸಾಧ್ಯತೆ ಇದೆ. ಕಣಿವೆ ಪ್ರದೇಶದಲ್ಲಿ ಅಡಿಕೆ ತೋಟ ಮಾಡಿಕೊಂಡಿರುವ ಬೆಳೆಗಾರರು ಹೆಚ್ಚು ಜಾಗೃತೆಯಿಂದ ತೋಟ ನಿರ್ವಹಣೆ ಮಾಡಬೇಕು ಎಂದರು.
ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜಪ್ಪ ಅಡಿವೆಪ್ಪರ್ ಮಾತನಾಡಿ, ಬೆಳೆಗಾರರು ಅಂತರ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ತೋಟಗಳಲ್ಲಿ ರೋಗಗ್ರಸ್ತ ಮೆಣಸಿನ ಬಳ್ಳಿಗಳನ್ನು ತೆಗೆದು ಹಾಕಬೇಕು. ಇದರ ಜೊತೆಗೆ ರೋಗಬಾಧೆಯಿಂದ ಉದುರಿರುವ ಕೋಕೋ ಕಾಯಿಗಳನ್ನು ತೆಗೆದು ಹಾಕಬೇಕು. ತೋಟಕ್ಕೆ ಗಾಳಿಬೆಳಕು ಬರುವಂತೆ ಸೂಕ್ತ ನಿಗಾವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಹರ್ಷ, ಲಕ್ಷ್ಮೀನಾರಾಯಣ, ಸುಬ್ರಾವ್, ಶಂಕರನಾರಾಯಣ ಇನ್ನಿತರರು ಹಾಜರಿದ್ದರು.