ಕೆರೆ ಒತ್ತುವರಿ ಆದೇಶ ಉಲ್ಲಂಘನೆ: ತಹಶೀಲ್ದಾರ್ ವಿರುದ್ಧ ಪ್ರತಿಭಟನೆ
ಶಿವಮೊಗ್ಗ, ಆ. 31: ಕೆರೆ ಒತ್ತುವರಿ ತೆರವು ಆದೇಶ ಉಲ್ಲಂಘಿಸಿರುವ ಭದ್ರಾವತಿ ತಹಶೀಲ್ದಾರ್ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕೆಂದು ಆಗ್ರಹಿಸಿ ಅರಬಿಳಚಿ ಗ್ರಾಮಸ್ಥರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಹೊಳೆಹೊನ್ನೂರು ಹೋಬಳಿ ಅರಬಿಳಚಿ ಗ್ರಾಮದ ಸರ್ವೇ ನಂ. 255 ರ ನಾಗಸಮುದ್ರ ಕೆರೆ ಮತ್ತು ಸರ್ವೇ ನಂ. 102 ರ ತಿರುಕಯ್ಯನ ಕೆರೆ ಒತ್ತುವರಿಯಾಗಿದ್ದು, ಇದನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಆದರೆ ಈ ಆದೇಶವನ್ನು ಇಲ್ಲಿಯವರೆಗೂ ಭದ್ರಾವತಿ ತಹಶೀಲ್ದಾರ್ ಕಾರ್ಯಗತಗೊಳಿಸಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ. ಹಾಗೆಯೇ ಅರಬಿಳಚಿ ಗ್ರಾಮ ಪಂಚಾಯ್ತಿ ಆಡಳಿತ ಕೂಡ ನಿಯಮ ಉಲ್ಲಂಘನೆ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಈ ಬಗ್ಗೆ ಗ್ರಾಪಂನಲ್ಲಿ ಯಾವುದೇ ಸಭೆಯನ್ನೂ ಕರೆಯದೆ, ನಿರ್ಣಯ ಮಾಡದೆ, ಗ್ರಾಮಸ್ಥರ ಗಮನಕ್ಕೂ ತಾರದೆ ಜಿಲ್ಲಾಧಿಕರಿ ಆದೇಶವನ್ನೇ ಮುಂದೂಡಿದ್ದಾರೆ. ಕೆಲವು ಗ್ರಾಮ ಪಂಚಾಯಿತಿ ಸದಸ್ಯರೇ ಕೆರೆ ಒತ್ತುವರಿ ಮಾಡಿಕೊಂಡಿರುವುದೇ ಇದಕ್ಕೆ ಕಾರಣವಾಗಿದೆ. ಅವರು ತಮ್ಮ ಪ್ರಭಾವವನ್ನು ಬಳಸಿಕೊಂಡು ಕೆರೆ ತೆರವು ಕಾರ್ಯಾಚರಣೆ ಮುಂದೂಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ.
ಕೆರೆಗಳು ಜೀವನಾಡಿಗಳಾಗಿದ್ದು, ಇವುಗಳನ್ನು ಉಳಿಸಬೇಕಾದ ಹೊಣೆ ಎಲ್ಲರದ್ದಾಗಿದೆ. ಆದರೆ ಬೇಲಿಯೇ ಎದ್ದು ಹೊಲ ಮೇಯ್ದ ರೀತಿಯಲ್ಲಿ, ಕೆರೆಯನ್ನು ಗ್ರಾಪಂ ಸದಸ್ಯರೇ ಒತ್ತುವರಿ ಮಾಡಿಕೊಂಡಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ. ತಕ್ಷಣವೇ ಜಿಲ್ಲಾಧಿಕಾರಿ ಆದೇಶ ಪಾಲನೆ ಮಾಡದ ಭದ್ರಾವತಿ ತಾಲೂಕು ತಹಶೀಲ್ದಾರರನ್ನು ಅಮಾನತಿನಲ್ಲಿಡಬೇಕು. ಕೆರೆ ಒತ್ತುವರಿ ಮಾಡಿಕೊಂಡವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇದಕ್ಕೆ ಸಹಕಾರ ನೀಡಿದ ಜನಪ್ರತಿನಿಧಿಗಳು ಹಾಗೂ ಅಧಿಕರಿಗಳ ವಿರುದ್ಧವು ಕೂಡ ಕ್ರಮ ಜರಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಧೀರರಾಜ್, ಬಿಳಕಿ ಕೃಷ್ಣಮೂರ್ತಿ, ಸೋಮೇಶ್, ಶ್ರೀನಿವಾಸ್ ಸೇರಿದಂತೆ ಹಲವರಿದ್ದರು.