×
Ad

ಲಕ್ಷ್ಮೀ ಹೆಬ್ಬಾಳ್ಕರ್ ಗಡಿಪಾರಿಗೆ ಆಗ್ರಹಿಸಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ

Update: 2017-08-31 17:05 IST

ಶಿವಮೊಗ್ಗ, ಆ. 31: ಮಹಾರಾಷ್ಟ್ರ ರಾಜ್ಯದ ಪರ ಹೇಳಿಕೆ ನೀಡಿರುವ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಗಡಿಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ನಗರದ ಡಿ.ಸಿ. ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. 

ಸುಪ್ರೀಂ ಕೋರ್ಟ್ ಆದೇಶ ಮಹಾರಾಷ್ಟ್ರ ಪರ ಬಂದರೆ ಮೊದಲು ಮಹಾರಾಷ್ಟ್ರದ ಬಾವುಟ ಹಿಡಿದು ನಾನೇ ಜೈ ಎನ್ನುವೆ ಎಂಬ ರಾಜ್ಯದ್ರೋಹಿ ಹೇಳಿಕೆಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೀಡಿದ್ದು, ಅವರು ಕರ್ನಾಟಕದಲ್ಲಿ ನೆಲೆಸಲು ಯೋಗ್ಯರಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಹಾಜನ್ ವರದಿ ಪ್ರಕಾರ ಬೆಳಗಾವಿ ಕರ್ನಾಟಕಕ್ಕೆ ಸೇರಿದೆ. ಆದರೆ ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಬಸರಿಕಟ್ಟೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮರಾಠಿಗರ ಓಲೈಕೆಗಾಗಿ ಕರ್ನಾಟಕ ಜನರ ವಿರುದ್ಧ ವಿವಾದಾತ್ಮಕ ಹೇಳಿಕೆಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ್ದಾರೆ. ಇಂತಹ ರಾಜಕಾರಣಿಗಳು ನಮಗೆ ಬೇಡ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ಲಕ್ಷ್ಮೀ ಹೆಬ್ಬಾಳ್ಕರ್‍ರವರಿಗೆ ಮಹಾರಾಷ್ಟ್ರ ರಾಜ್ಯ ಪ್ರಿಯವಾಗಿದ್ದರೆ ಅಲ್ಲೇ ಹೋಗಿ ವಾಸಿಸಲಿ. ಇಲ್ಲಿಗೆ ಬರುವುದು ಬೇಡ. ಇಂತಹವರು ನಮ್ಮ ರಾಜ್ಯದಲ್ಲಿ ಇರಕೂಡದು. ಹಾಗಾಗಿ ಅವರನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಎಸ್.ಬಿ. ಶಿವಕುಮಾರ್, ವೀರಭದ್ರನಾಯಕ, ಅಪ್ಪು, ಕುಮಾರ್, ಗಣೇಶ್, ಹೆಚ್.ಎಸ್.ಕಿರಣ್‍ಕುಮಾರ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News