×
Ad

ಜಾತಿವಾದ, ಕೋಮವಾದಿಂದ ಬಿಡುಗಡೆಯಾಗದೇ ದೇಶ ಅಭಿವೃದ್ಧಿ ಅಸಾಧ್ಯ: ಡಾ.ಕೆ.ಮರುಳುಸಿದ್ದಪ್ಪ

Update: 2017-08-31 18:00 IST

ತುಮಕೂರು, ಆ.31: ಇಂದು ದೇಶವನ್ನು ಜಾತಿವಾದ, ಭ್ರಷ್ಟಾಚಾರ,ವಂಶವಾದ ಮತ್ತು ಕೋಮುವಾದ ಆಳುತ್ತಿದ್ದು, ಪ್ರಜಾ ಪ್ರಭುತ್ವವೆಂದು ಕೇವಲ ಬೂಟಾಟಿಕೆಯ ಮಾತಾಗಿದೆ.ಇದರಿಂದ ಬಿಡುಗಡೆಯಾಗದ ಹೊರತು ದೇಶದ ಉದ್ದಾರ ಸಾಧ್ಯವಿಲ್ಲ ಎಂದು ಕುವೆಂಪು ಭಾಷಾ ಭಾರತಿಯ ಅಧ್ಯಕ್ಷ ಹಾಗೂ ಚಿಂತಕ ಡಾ.ಕೆ.ಮರುಳುಸಿದ್ದಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಗರದ ತುಮಕೂರು ವಿವಿಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ತುಮಕೂರು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ತಳ ಸಮುದಾಯಗಳ ಸಾಮಾಜಿಕ ಹೋರಾಟದ ದಾರಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನಗಳ ಪ್ರಸ್ತುತತೆ ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತಿದ್ದ ಅವರು, ಆಹಾರ,ಮೈಮೇಲೆ ಹಾಕುವ ಬಟ್ಟೆ ಎಲ್ಲವನ್ನು ಇನ್ನೊಬ್ಬರು ನಿರ್ಧರಿಸುವಂತಾಗಿದೆ.ದಲಿತರಿಗೆ,ಅಲ್ಪಸಂಖ್ಯಾತರಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ವಿಷಾದಿಸಿದರು.

ಹಿಂದುತ್ವ ಎಂಬುದು 12ನೆ ಶತಮಾನದ ಶರಣರ ಹೋರಾಟವೂ ಸೇರಿದಂತೆ ದಲಿತ,ರೈತ ಹೋರಾಟಗಳನ್ನು ಜೀರ್ಣಿಸಿ ಕೊಂಡಿದೆ.ಎಲ್ಲಾ ಹೋರಾಟಗಳು ಕೇವಲ ಘೋಷಣೆಗಳಾಗಿ ಮಾತ್ರ ಇಂದು ಉಳಿದುಕೊಂಡಿವೆ.ಜಾತಿ, ಲಿಂಗ, ವರ್ಗ ತಾರತಮ್ಯ ತಾಂಡವವಾಡುತ್ತಿದ್ದು,ಇದರ ವಿರುದ್ಧ ಪ್ರಭಲ ಹೋರಾಟದ ಅಗತ್ಯವಿದೆ. ಇದಕ್ಕೆ ಈ ಕಾರ್ಯಾಗಾರ ನಾಂದಿ ಹಾಡಲಿ ಎಂದು ತಿಳಿಸಿದರು.

ಶ್ರೇಣಿಕೃತ ಜಾತಿ ವ್ಯವಸ್ಥೆ ಅಧುನಿಕ ಸಮಾಜದಲ್ಲಿ ಪ್ರಬಲಗೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಶಕ್ತಿ ಬುಡದಿಂದ ಬಂದರೆ,ಅಧಿಕಾರ ಮೇಲಿನಿಂದ ಬರುತ್ತಿರುವುದು ವರ್ಷದಿಂದ ವರ್ಷಕ್ಕೆ ದೇಶ ದಿಕ್ಕೆಡುತ್ತಿರುವುದರ ಸಂಕೇತವಾಗಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಪಾಳೇಗಾರಿಕೆ ಮುಂದುವರೆದಿರುವುದು ವಿರೋಧಾಭಾಸವೇ ಸರಿ ಎಂದ ಅವರು, ಸಾಮಾನ್ಯ ಜನರಲ್ಲಿದ್ದ ನೈತಿಕತೆ,ಹೊಣೆಗಾರಿಕೆ ಮತ್ತು ಪ್ರತಿಭೆ ಎಂಬುದು ಸರಿಯಾದ ರೀತಿ ಬಳಕೆಯಾಗದಿರುವುದೇ ಇಂದಿನ ದುಸ್ಥಿತಿಗೆ ಕಾರಣ ಎಂದರು.

ಈ ದೇಶದ ಬಹುಸಂಖ್ಯಾತರಾಗಿರುವ ದಲಿತರು ತಮ್ಮ ಅಸ್ಮಿತೆಗಾಗಿ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅಧ್ಯಯನ ಮಾಡಿ ಅವರನ್ನು ಆರಾಧಿಸಿದರೆ, ಇನ್ನೊಂದು ವರ್ಗ ತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಅಂಬೇಡ್ಕರ್ ಅವರನ್ನು ಆರಾಧಿಸಲು ಹೊರಟಿದೆ. ಮನು ಸ್ಮೃತಿಯನ್ನು ಸಂವಿಧಾನ ವಾಗಿಸಬೇಕು ಎಂದ ಗೋಳವಾಲ್ಕರ್ ಅವರನ್ನು ಆರಾಧಿಸುವ ಸಮುದಾಯವೇ, ಮನು ಸೃತಿಯನ್ನು ಸುಟ್ಟ ಅಂಬೇಡ್ಕರ್ ಅವರನ್ನು ಆರಾಧಿಸಲು ಹೊರಟಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.ಇದರ ಬಗ್ಗೆ ದಲಿತರು ಎಚ್ಚೆತ್ತುಕೊಳ್ಳ ಬೇಕಾಗಿದೆ ಎಂದು ಡಾ.ಕೆ.ಮರಳುಸಿದ್ದಪ್ಪ ತಿಳಿಸಿದರು.

ಸಾಹಿತಿ ಕೆ.ಬಿ.ಸಿದ್ದಯ್ಯ ಮಾತನಾಡಿ, ಎರಡು ದಿನಗಳ ಈ ಕಾರ್ಯಾಗಾರದಲ್ಲಿ ತಳ ಸಮುದಾಯವನ್ನು ಗುರುತಿಸುವ ಮಾನದಂಡ ಯಾವುದು ಎಂಬುದರ ಬಗ್ಗೆ ಹೆಚ್ಚಿನ ಚರ್ಚೆ ನಡೆಯುವ ಅಗತ್ಯವಿದೆ.ಕೆಲವರು ತಳ ಸಮುದಾಯವನ್ನು ಗುರುತಿಸಲು ಅರ್ಥಿಕ ದೃಷ್ಟಿಕೋನವನ್ನು ಮಾತ್ರ ಮುಂದಿಡುತಿದ್ದಾರೆ. ನಿಜವಾಗಿ ತಳಸಮುದಾಯವನ್ನು ಗುರುತಿಸ ಬೇಕಾಗಿರುವುದು ಜಾತಿ ಮತ್ತು ಲಿಂಗದ ದೃಷ್ಟಿಕೋನದಲ್ಲಿ ನೋಡುಬೇಕಾಗಿದೆ. ಸಂಪ್ರದಾಯಕ ಜಾತಿ ಪದ್ಧತಿಗಿಂತ, ಆಧುನಿಕ ಜಾತಿ ಪದ್ದತಿಯನ್ನು ಗುರುತಿಸುವುದೇ ದೊಡ್ಡ ಸವಾಲಾಗಿದೆ.ಎಂ.ಎನ್.ಸಿ.ಕಂಪನಿ ಪ್ರಯೋಜಿತ ವಿವಿ ಸಂಶೋಧನಾ ಕೇಂದ್ರಗಳು ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ ಎಂಬ ವಾದವನ್ನು ಮುಂದಿಡುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ತುಮಕೂರು ವಿವಿ ಪ್ರಭರ ಕುಲಪತಿ ಪ್ರೊ.ಜಯಶೀಲ ,ಹೋರಾಟಗಾರರಾದ ಡಾ.ಲಕ್ಷ್ಮಿನಾರಾಯಣ ನಾಗಾವರ, ಡಾ.ಚಂದ್ರಶೇಖರ್, ಡಾ.ಲೋಕೇಶ್‍ಬಾಬು, ಡಾ.ಪ್ರಶಾಚಿತ್ ನಾಯಕ್, ವಿವಿ ಕುಲಸಚಿವ ಪ್ರೊ.ವೆಂಕಟೇಶ್ವರಲು ಮತ್ತಿತರರು ಉಪಸ್ಥಿತರಿದ್ದರು.

ಸಮಕಾಲಿನ ಸಾಮಾಜಿಕ ಹೋರಾಟಗಳು: ಅಂಬೇಡ್ಕರ ಅವರ ತಾತ್ವಿಕತೆ ಕುರಿತು ಪಾವರ್ತೀಸ್, ಕಂದೂರು ತಿವ್ಮ್ಮಯ್ಯ, ಎ.ನರಸಿಂಹಮೂರ್ತಿ,ನರಸೀಯಪ್ಪ, ಮಾಧ್ಯಮ ಮತ್ತು ಕಾರ್ಮಿಕ ಚಳುವಳಿಗಳಲ್ಲಿ ಅಂಬೇಡ್ಕರ್ ಚಿಂತನೆ ಎಂಬ ವಿಷಯ ಕುರಿತು ಉಗಮ ಶ್ರೀನಿವಾಸ್, ಸೈಯದ್ ಮುಜೀಬ್,ಸಿ.ಕೆ.ಮಹೇಂದ್ರ ಮಾತನಾಡುವರು. ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಟಿ.ಕೆ.ವಿವೇಕಾನಂದ ವಹಿಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News