ವಚನ ಸಾಹಿತ್ಯದಿಂದ ಶೋಷಣೆ ತೊಲಗಿಸುವ ಪ್ರಯತ್ನ ನಡೆದಿತ್ತು: ಭಾರ್ಗವ ನಾಡಿಗ್
ಸೊರಬ, ಆ.31: ಅಸಮಾನತೆಯು ಅಸ್ಥಿತ್ವದಲ್ಲಿದ್ದ ಹನ್ನೇರಡನೆ ಶತಮಾನದಲ್ಲಿ ಅಕ್ಷರದ ಮೂಲಕ ಕ್ರಾಂತಿ ನಡೆದಿದ್ದು ಕಲ್ಯಾಣ ಕ್ರಾಂತಿ. ಕಲ್ಯಾಣ ಕ್ರಾಂತಿಯಲ್ಲಿ ವಚನ ಸಾಹಿತ್ಯದಿಂದಲೇ ಶೋಷಣೆಯನ್ನು ತೊಲಗಿಸುವ ಪ್ರಯತ್ನ ನಡೆಯಿತು ಎಂದು ಉಪನ್ಯಾಸಕ ಭಾರ್ಗವ ನಾಡಿಗ್ ತಿಳಿಸಿದರು.
ಪಟ್ಟಣದ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಮತ್ತು ತಾಲ್ಲೂಕಿನ ಶರಣ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ನಡೆದ ವಚನ ದಿನ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯದಲ್ಲಿರುವ ಸಮಾನತೆಯ ಆಶಯಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಶ್ರಮಿಕ ವರ್ಗ ಸಮಾನತೆಗೆ ಹೋರಾಟ ಸಾರಿದ ಕಾಲಘಟ್ಟ 12ನೇ ಶತಮಾನವಾಗಿದೆ. ಕಾಯಕವನ್ನೆ ದೇವರಾಗಿಸಿಕೊಂಡು ಬದುಕಿದ ವರ್ಗದವರನ್ನು ದೇವರಿಗೆ ಸರಿಸಮನಾಗಿ ನೋಡುವ ಪರಿಪಾಠವಿತ್ತು. ಕಾಯಕ, ಧರ್ಮ, ದಾಸೋಹಗಳನ್ನು ವಚನ ಸಾಹಿತ್ಯ ಬಲವಾಗಿ ನಂಬಿ ಹೆಣ್ಣು ಗಂಡೆನ್ನದೆ ಎಲ್ಲಾ ಸಮುದಾಯ, ಜಾತಿಯ ಜನರಿಗೆ ಸಮಾನತೆಯ ಹಕ್ಕನ್ನು ಪ್ರತಿಪಾದಿಸಿದ ಸಾಹಿತ್ಯವಾಗಿತ್ತು. ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯದ ದಿಕ್ಕೆ ಬದಲಾಯಿತು ಎಂದರು.
ನಿಲಯ ಮೇಲ್ವಿಚಾರಕಿ ಪುಷ್ಪಲತಾ ಬಾವಿಮಠ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಚನ ಯುಗವು ವಿಶ್ವ ಧರ್ಮವಾಗುವ ಬಗೆ ಬಗ್ಗೆ ಉಪನ್ಯಾಸ ನೀಡಿ, ವಚನ ಸಾಹಿತ್ಯ ಪ್ರಜಾಸಾಹಿತ್ಯವಾಗಿದೆ. ಸಾಮಾನ್ಯ ಜನರ ಹಾಗೂ ಶೋಷಿತರ ಜೀವನುಭವವನ್ನು ಪ್ರಚುರಪಡಿಸಿದ ಮಹತ್ವದ ಸಾಹಿತ್ಯ. ಪ್ರತಿಯೊಬ್ಬರು ಮನುಷ್ಯ ಧರ್ಮವನ್ನು ಪರಿಪಾಲಿಸಿಕೊಳ್ಳುವುದರ ಜೊತೆಗೆ ಇಂದಿನ ಯುವ ಸಮುದಾಯಕ್ಕೆ ವಚನ ಸಾಹಿತ್ಯದ ಸಾರವನ್ನು ಉಣಬಡಿಸಿ ವಿಶ್ವಮಾನವರನ್ನಾಗಿಸಬೇಕು ಎಂದು ಹೇಳಿದರು.
ಈ ವೇಳೆ ಬೆಂಗಳೂರಿನ ಉದ್ಯಮಿ ಹಾಗೂ ದತ್ತಿದಾನಿ ಇ.ಶಿವಕುಮಾರ್, ಭರತ್ ಕಾರೇಕೊಪ್ಪ, ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಎಸ್.ಕೃಷ್ಣಾನಂದ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಹಾಲೇಶ್ ನವುಲೆ, ಸದಸ್ಯ ಎಸ್.ಎಂ. ನೀಲೇಶ್, ಶಂಭುಲಿಂಗಯ್ಯ, ರೇಣುಕಮ್ಮ ಗೌಳಿ, ಲೋಲಾಕ್ಷಮ್ಮ, ಸುನಂದ, ಪುಟ್ಟಸ್ವಾಮಿ ಗೌಡ ಮತ್ತಿತರರು ಹಾಜರಿದ್ದರು.