ಅಲ್ಪಸಂಖ್ಯಾತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯ
ಚಿಕ್ಕಮಗಳೂರು, ಆ.31: ಅಲ್ಪಸಂಖ್ಯಾತರ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿರುವ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಕೂಡಲೆ ಬಗೆ ಹರಿಸಬೇಕೆಂದು ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಫೂರ್ ರವರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಮನವಿ ಮಾಡಿದರು.
ಗುರುವಾರ ಬೆಳಗ್ಗೆ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ಅಧ್ಯಕ್ಷರಿಗೆ ವಿಜಯಕುಮಾರ್ ಮನವಿ ಮಾಡಿ, ಜಿಲ್ಲೆಯ ಅಲ್ಪಸಂಖ್ಯಾತರ ಇಲಾಖೆಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಉಳಿದ ಅಲ್ಪಸಂಖ್ಯಾತರ ಮಂದಿರ, ಮಸೀದಿ, ಚರ್ಚ್‍ಗಳ, ಅಭಿವೃದ್ಧಿ ಸಮುದಾಯ ಭವನಗಳ ನಿರ್ಮಾಣಕ್ಕೆ ಹಲವು ಅರ್ಜಿಗಳು ಬಂದಿದೆ ಎಂದು ಗಮನ ಸೆಳೆದರು.
ಕೆಲವು ಅರ್ಜಿಗಳು ಇಲಾಖೆಯಲ್ಲಿ ವಿಲೇವಾರಿಯಾಗದೆ ಉಳಿದಿರುವ ದೂರುಗಳಿವೆ. ಯಾವ ಕಾರಣಕ್ಕಾಗಿ ಅನುದಾನಗಳು ಬಿಡುಗಡೆ ಯಾಗಿಲ್ಲ. ಸರ್ಕಾರದಿಂದ ಇಲಾಖೆಗೆ ಅನುದಾನ ಬಂದಿಲ್ಲವೆ ಎಂಬುದನ್ನು ಪರಿಶೀಲಿಸಿ ಕೂಡಲೆ ಸಂಬಂಧ ಪಟ್ಟ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ವಕ್ತಾರ ರೂಬೆನ್ ಮೊಸೆಸ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ.ಸಂದೀಪ್, ಸಿಲ್ವರ್‍ಸ್ಟರ್, ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕಾರ್ತಿಕ್ ಜಿ. ಚೆಟ್ಟಿಯಾರ್ ಉಪಸ್ಥಿತರಿದ್ದರು.