ಅಲ್ಪಸಂಖ್ಯಾತರು ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಎಂ.ಎ. ಗಫೂರ್ ಕರೆ

Update: 2017-08-31 13:18 GMT

ಚಿಕ್ಕಮಗಳೂರು, ಆ.31: ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಯೋಜನೆಗಳ ಲಾಭವನ್ನು ಅರ್ಹ ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್ ತಿಳಿಸಿದರು.

ಅವರು ಗುರುವಾರ ನಗರದ ಫುರ್ಖಾನಿಯಾ ಶಾದಿ ಮಹಲ್‍ನಲ್ಲಿ ಜಿಲ್ಲಾಡಳಿತ, ಜಿಪಂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಾಗೂ ಕರ್ನಾಟಕ ಜóಕಾತ್ ಚಾರಿಟಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಅರಿವು ಹಾಗೂ ಸೌಲಭ್ಯ ಪಡೆಯುವ ಕುರಿತು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸರ್ಕಾರದ ಕಾರ್ಯಕ್ರಮ ಹಾಗೂ ಯೋಜನೆಗಳು ಅಲ್ಪಸಂಖ್ಯಾತ ನೈಜ್ಯ ಫಲನುಭಾವಿಗಳಿಗೆ ತಲುಪಿಸುವುದೆ ನಿಗಮದ ಮುಖ್ಯ ಉದ್ದೇಶವಾಗಿದೆ. ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಾಭಿವೃದ್ಧಿಗಾಗಿ ಅನೇಕ ಜನಪರ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಜಾರಿಗೆ ತಂದಿದೆ. ಇದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿ ಅವರು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಸ್ವಾವಲಂಭಿಯಾಗುವುದರ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದರು.

ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಗಳಿಗೆ ಪ್ರಸ್ತುತ ಸಾಲಿನ ಆಯವ್ಯಯದಲ್ಲಿ 2750 ಕೋಟಿ ಹಣವನ್ನು ನಿಗಧಿಗೊಳಿಸಿದೆ ಎಂದ ಅವರು ಜನರಿಗೆ ತಲುಪುವ ಸೌಲಭ್ಯಗಳು ನೇರವಾಗಿ ತಲುಪಿಸಲು ಹಾಗೂ ಮಧ್ಯವರ್ತಿಗಳ ತಡೆಯಲು ಆನ್‍ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೇಲಿದ್ದು ಇವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಪ್ರತಿಯೊಬ್ಬರೂ ಸ್ವಾವಲಂಭಿಗಳನ್ನಾಗಿಸಬೇಕು ಎಂದು ನುಡಿದರು.

ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ರವೀಂದ್ರ ಬೆಳವಾಡಿ ಮಾತನಾಡಿ, ಸರ್ಕಾರ ಯೋಜನೆಗಳನ್ನು ರೂಪಿಸುತ್ತದೆ ಇವುಗಳಿಗೆ ಸ್ವರೂಪವನ್ನು ಕೊಡುವ ಕೆಲಸವನ್ನು ಇಲಾಖೆಗಳು ಮಾಡಬೇಕು. ಜನ ಸಾಮಾನ್ಯರು ಇವುಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಶಿಕ್ಷಣ ಹಾಗೂ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.

ಮುಖಂಡರಾದ ಅಮ್ಜದ್ ಖಾನ್, ಅತಿಕ್ ಕೈಸರ್, ಮಹ್ಮದ್ ಅಕ್ಬರ್ ಹಾಗೂ ಜೇಮ್ಸ್ ಡಿಸೋಜ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೆಎಂಡಿಸಿ ನಿರ್ದೇಶಕ ಶೈಲೇಂದ್ರ ಗೌಡ, ತನ್ವಿರ್ ಅಹ್ಮದ್, ಫೈರೋಝ್ ಖಾನ್, ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ತಿಪ್ಪೇಸ್ವಾಮಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಬಿಂದುಮಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News