ನೋಟು ನಿಷೇಧವೆಂಬ ಮಹಾ ಹಗರಣ

Update: 2017-08-31 19:01 GMT

ದೇಶದೊಳಗಿರುವ ಕಪ್ಪು ಹಣವನ್ನು ಹೊರಹಾಕುತ್ತೇನೆಂದು ಹೇಳಿ ದೇಶದೊಳಗೆ ನೋಟು ನಿಷೇಧವೆಂಬ ‘ಆರ್ಥಿಕ ತುರ್ತುಪರಿಸ್ಥಿತಿ’ಯನ್ನು ಘೋಷಿಸಿ, ಶ್ರೀಸಾಮಾನ್ಯನ ಬದುಕನ್ನು ಬ್ಯಾಂಕಿನ ಕಪಿಮುಷ್ಟಿಯೊಳಗೆ ಸಿಲುಕಿಸಿದ ಪ್ರಧಾನಿ ನರೇಂದ್ರ ಮೋದಿ ಬಾಯಿತೆರೆಯಲೇ ಬೇಕಾದಂತಹ ಸಂದರ್ಭ ಎದುರಾಗಿದೆ. ಬ್ಯಾಂಕಿನ ಮುಂದೆ ಕ್ಯೂ ನಿಂತು ನೂರಾರು ವೃದ್ಧರು ಮೃತಪಟ್ಟರು. ದೇಶಾದ್ಯಂತ ಸಣ್ಣ ಉದ್ದಿಮೆ ನೆಲಕಚ್ಚಿವೆ. ಶ್ರೀಮಂತರಷ್ಟೇ ಕಣ್ಣೀರು ಸುರಿಸುತ್ತಿದ್ದಾರೆ ಎಂದು ವಿತ್ತ ಸಚಿವರು ಪದೇ ಪದೇ ಹೇಳಿಕೆ ನೀಡಿದರಾದರೂ, ಮಾಧ್ಯಮಗಳ ಮುಖಪುಟದಲ್ಲಿ ವೃದ್ಧರು ಕಣ್ಣೀರು ಸುರಿಸುವ ಚಿತ್ರಗಳು ಪ್ರತಿದಿನ ಚರ್ಚೆಗೊಳಗಾಗುತ್ತಿತ್ತು.

ನೋಟು ನಿಷೇಧದಿಂದ ಭಾರೀ ಪ್ರಮಾಣದ ಕಪ್ಪು ಹಣ ಹೊರಗೆ ಬರುತ್ತದೆ, ಕಾಶ್ಮೀರದಲ್ಲಿ ಕಲ್ಲುತೂರಾಟ ನಿಲ್ಲುತ್ತದೆ, ಭಯೋತ್ಪಾದಕರಿಗೆ, ಉಗ್ರರಿಗೆ ಕಡಿವಾಣ ಬೀಳುತ್ತದೆ ಎಂದೆಲ್ಲ ಹೇಳಿಕೆಗಳನ್ನು ನೀಡುತ್ತಾ ನರೇಂದ್ರ ಮೋದಿಯವರು ಜನರನ್ನು ವಂಚಿಸಿದರು. ಇದೀಗ ಆರ್‌ಬಿಐ, ತನಗೆ ಬಂದಿರುವ ಕಪ್ಪು ಹಣದ ಬಗ್ಗೆ ಮಾಹಿತಿಯನ್ನು ಹೊರಗೆಡಹಿದೆ. ಅಪಾರ ಪ್ರಮಾಣದಲ್ಲಿ ಆರ್‌ಬಿಐಗೆ ನಷ್ಟ ಉಂಟಾಗಿದೆ. ಮಾತ್ರವಲ್ಲ, ದೇಶಾದ್ಯಂತ ಆರ್ಥಿಕ ವ್ಯವಹಾರಗಳೇ ನೆಲಕಚ್ಚಿದೆ. ದೇಶದ ಜಿಡಿಪಿ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ತನ್ನ ಮೇಲೆ ಭರವಸೆಯಿಟ್ಟ ದೇಶದ ಕೋಟ್ಯಂತರ ಜನರಿಗೆ ನರೇಂದ್ರ ಮೋದಿ ಹಾಡಹಗಲೇ ವಂಚಿಸಿರುವುದು ಬಹಿರಂಗವಾಗಿದೆ. ಜನರ ತ್ಯಾಗ ಬಲಿದಾನ, ನೋವು ಸಂಕಟಗಳನ್ನು ನರೇಂದ್ರ ಮೋದಿ ಸರಕಾರ ಅಪಹಾಸ್ಯಕ್ಕೀಡು ಮಾಡಿದೆ.

ನೋಟು ನಿಷೇಧಕ್ಕೆ ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆಗೊಳಿಸಿರುವ ದತ್ತಾಂಶಗಳು ಹಾಗೂ ಈ ಬಗ್ಗೆ ಸರಕಾರ ನೀಡಿರುವ ವಿವರಣೆಯು ನೋಟು ನಿಷೇಧವು ದಯನೀಯ ವೈಫಲ್ಯವನ್ನು ಕಂಡಿರುವುದರ ಸ್ಪಷ್ಟ ಸೂಚನೆಯಾಗಿದೆ. ಆರ್‌ಬಿಐ ಬಿಡುಗಡೆಗೊಳಿಸಿರುವ ದತ್ತಾಂಶಗಳು, ಕಳೆದ ನವೆಂಬರ್‌ನಲ್ಲಿ ಅಮಾನ್ಯಗೊಳಿಸಿದ ಶೇ.99ರಷ್ಟು ನೋಟುಗಳು ಬ್ಯಾಂಕ್‌ಗಳಿಗೇ ವಾಪಸಾಗಿವೆ ಎಂಬುದನ್ನು ತೋರಿಸಿಕೊಟ್ಟಿದೆ. ಅಂದರೆ ಯಾರ ಬಳಿ ಕಪ್ಪುಹಣವಿತ್ತೋ ಅವರೆಲ್ಲ ಯಶಸ್ವಿಯಾಗಿ ಆ ಹಣವನ್ನು ಬ್ಯಾಂಕ್ ವ್ಯವಸ್ಥೆಯೊಳಗೆ ಮರಳಿ ತಂದಿದ್ದಾರೆ ಎಂದಾಯಿತು. ಈ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲಿ ಯಾವುದೇ ರೀತಿಯ ಸಮಜಾಯಿಷಿಗಳನ್ನು ನೀಡಲಿಲ್ಲ ಎನ್ನುವುದೇ ನೋಟು ನಿಷೇಧಕ್ಕೆ ಸಂಬಂಧಿಸಿ ಸರಕಾರದ ನೀತಿಯು ಸಂಪೂರ್ಣ ವಿಫಲವಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.

 ನಿಷೇಧಿತ ನೋಟುಗಳು ವಾಪಸಾಗಿರುವುದರಿಂದ ಬ್ಯಾಂಕ್‌ಗಳಲ್ಲಿ ಬೃಹತ್ ಪ್ರಮಾಣದ ಠೇವಣಿ ಸಂಗ್ರಹಗೊಂಡಿದೆ. ಈ ಹಣವನ್ನ್ನು ಉದ್ಯಮಗಳನ್ನು ಆರಂಭಿಸಲು ಸಾಲವಾಗಿ ನೀಡಲಾಗುವುದು ಎಂದೆಲ್ಲಾ ಸರಕಾರ ಪ್ರಚಾರ ಮಾಡಿತ್ತು. ಆದರೆ ನಗದು ಅಮಾನ್ಯಗೊಂಡ ಆನಂತರ 9 ತಿಂಗಳುಗಳಲ್ಲಿ ಬ್ಯಾಂಕ್ ಸಾಲದ ಬೆಳವಣಿಗೆಯು ಕಳೆದ 60 ವರ್ಷಗಳಲ್ಲೇ ಕನಿಷ್ಠವಾಗಿದೆ. ಆದರೆ ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಜೇಟ್ಲಿಯವರು ಸರಕಾರದ ವೈಫಲ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. ಕಪ್ಪುಹಣವನ್ನು ವಶಪಡಿಸಿಕೊಳ್ಳುವುದು ಸರಕಾರದ ಉದ್ದೇಶವಾಗಿರಲಿಲ್ಲ. ಆರ್ಥಿಕತೆಯ ಪ್ರವೃತ್ತಿಯಲ್ಲಿ ಬದಲಾವಣೆಯನ್ನು ತರಲು ನಾವು ಬಯಸಿದ್ದೆವು ಎಂದು ಅವರು ಸಮಜಾಯಿಷಿ ನೀಡುತ್ತಿದ್ದಾರೆ.

 ಕಳೆದ ನವೆಂಬರ್‌ನಲ್ಲಿ ಇದೇ ಜೇಟ್ಲಿ, ಅಮಾನ್ಯಗೊಂಡ ಶೇ.15-20ರಷ್ಟು ಕರೆನ್ಸಿ ನೋಟುಗಳು ಅಂದರೆ 3 ಲಕ್ಷ ಕೋಟಿ ರೂ. ಮೊತ್ತದ ಕಪ್ಪುಹಣವು ವೌಲ್ಯ ಕಳೆದುಕೊಳ್ಳಲಿದ್ದು, ಅದು ಆರ್ಥಿಕ ವ್ಯವಸ್ಥೆಯೊಳಗೆ ಮರಳಲಾರದು ಎಂದಿದ್ದರು. ನೋಟು ನಿಷೇಧದ ಮೂಲಕ ವಶಪಡಿಸಿಕೊಳ್ಳಲಾದ ಕಪ್ಪುಹಣವು ಆರ್‌ಬಿಐ ಸೊತ್ತಾಗಲಿದ್ದು ಅದನ್ನು ಬಡವರ ಕಲ್ಯಾಣಕ್ಕಾಗಿ ಬಳಸಲಾಗುವುದೆಂಬ ಸರಕಾರದ ಹೇಳಿಕೆಗೆ ಇದು ತೀರಾ ವಿರುದ್ಧವಾಗಿತ್ತು. ನೋಟು ನಿಷೇಧದ ಬಳಿಕ ನೂತನ ಕರೆನ್ಸಿ ನೋಟುಗಳ ಮುದ್ರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ 30 ಸಾವಿರ ಕೋಟಿ ರೂ. ವ್ಯಯಿಸಿದೆ. ಆದರೆ ಈ ಮೊತ್ತವು ಆರ್ಥಿಕ ವ್ಯವಸ್ಥೆಯೊಳಗೆ ಬಾರದ 16 ಸಾವಿರ ಕೋಟಿ ರೂ. ಕಪ್ಪುಹಣಕ್ಕಿಂತಲೂ ಅಧಿಕವಾದುದಾಗಿದೆ. ಈ ಕೊರತೆಯಿಂದಾಗಿ, 2016-17ರ ಸಾಲಿನಲ್ಲಿ ಆರ್‌ಬಿಐ ಕೇಂದ್ರಕ್ಕೆ ನೀಡಿದ ಡಿವಿಡೆಂಡ್ ಅತ್ಯಂತ ಕಡಿಮೆಯಾಗಿತ್ತು.

ನಗದು ಅಮಾನ್ಯತೆಯ ಮೊದಲದಿನದಿಂದಲೇ ಮೋದಿ ಕಪ್ಪುಹಣವನ್ನು ವಶಪಡಿಸಿಕೊಳ್ಳುವ ಧಮ್ಕಿ ಹಾಕುತ್ತಲೇ ಬಂದಿದ್ದರು. ಕಪ್ಪುಹಣದ ವಿರುದ್ಧ ದೇಶಾದ್ಯಂತ ವ್ಯಾಪಕ ದಾಳಿಗಳನ್ನು ನಡೆಸಲಾಯಿತು.ಆರಂಭದ ದಿನಗಳಲ್ಲಿ ಸರಕಾರವು ಭಾರೀ ಉತ್ಸಾಹವನ್ನು ಪ್ರದರ್ಶಿಸಿತು ಹಾಗೂ ಕಪ್ಪುಹಣವು ಆರ್ಥಿಕ ವ್ಯವಸ್ಥೆಗೆ ವಾಪಸಾಗುತ್ತಿರುವುದಾಗಿ ಆರ್‌ಬಿಐ ಕೂಡಾ ದಿನಂಪ್ರತಿ ಮಾಹಿತಿ ನೀಡುತ್ತಿತ್ತು. ಆದರೆ, ಡಿಸೆಂಬರ್ ವೇಳೆಗೆ ಆರ್‌ಬಿಐ ದಿನಂಪ್ರತಿ ವರದಿಗಳನ್ನು ನೀಡುವುದನ್ನು ಸ್ಥಗಿತಗೊಳಿಸಿತು. ಯಾಕೆಂದರೆ ಅಮಾನ್ಯಗೊಂಡ ಬಹುತೇಕ ನೋಟುಗಳು ಬ್ಯಾಂಕ್‌ಗಳಿಗೆ ಮರಳಿ ಬರುತ್ತಿರುವುದು ಸರಕಾರಕ್ಕೆ ಅರಿವಾಯಿತು.

ಪ್ರಧಾನಿಗೆ ಇದು ತೀರಾ ಕೆಟ್ಟದೆನಿಸಿತು. ಡಿಸೆಂಬರ್ ಅಂತ್ಯದ ವೇಳೆಗೆ ಸುಮಾರು 13 ಲಕ್ಷ ಕೋಟಿ ರೂ. ವಾಪಸಾಗಿತ್ತು. ಪೇಚಿಗೆ ಬಿದ್ದ ಸರಕಾರವು ರಾಷ್ಟ್ರೀಯ ಭದ್ರತೆಯ ನೆಪ ಹೇಳಿ, ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸದಂತೆ ಆರ್‌ಬಿಐಗೆ ತಾಕೀತು ಮಾಡಿತ್ತು. ಈ ಹೊತ್ತಿಗೆ ಸರಕಾರವು ತನ್ನ ವರಸೆ ಬದಲಾಯಿಸಿ, ಡಿಜಿಟಲ್ ಆರ್ಥಿಕತೆಗೆ ಒತ್ತು ನೀಡುವುದು, ಖೋಟಾ ನೋಟುಗಳನ್ನು ಹಾಗೂ ಭಯೋತ್ಪಾದಕರಿಗೆ ಹಣಕಾಸು ನೆರವನ್ನು ಮಟ್ಟಹಾಕುವುದು ಕೂಡಾ ನೋಟು ನಿಷೇಧದ ಉದ್ದೇಶವೆಂದು ಸಾರತೊಡಗಿತು.

ಆದರೆ ದೇಶದಲ್ಲಿ ಕಪ್ಪುಹಣವು ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಶೇ.40ರಷ್ಟಿದ್ದರೂ, ಅದರ ಶೇ.6ರಷ್ಟು ಪ್ರಮಾಣ ಮಾತ್ರ ನಗದು ರೂಪದಲ್ಲಿದೆಯೆಂಬುದನ್ನು ಅರಿಯದೆ ಸರಕಾರ ಹುಂಬತನ ಪ್ರದರ್ಶಿಸಿದೆ. ಅಂದರೆ ದೇಶದಲ್ಲಿ 800 ಶತಕೋಟಿ ಡಾಲರ್ ವೌಲ್ಯದ ಕಪ್ಪುಹಣವಿದ್ದು, 50 ಶತಕೋಟಿ ಡಾಲರ್ ವೌಲ್ಯದ ಕಪ್ಪುಹಣ ಮಾತ್ರ ನಗದು ರೂಪದಲ್ಲಿ ಚಾಲ್ತಿಯಲ್ಲಿದೆ. ಉಳಿದ 750 ಶತಕೋಟಿ ಡಾಲರ್ ವೌಲ್ಯದ ಕಪ್ಪುಹಣವು ರಿಯಲ್ ಎಸ್ಟೇಟ್, ಚಿನ್ನ ಇತ್ಯಾದಿಗಳಲ್ಲಿ ಹೂಡಿಕೆಯಾಗಿರುವುದು ಈಗ ಅದಕ್ಕೆ ಅರಿವಾಗಿದೆ. ಡಿಜಿಟಲ್ ಹಣಕಾಸು ವ್ಯವಹಾರಕ್ಕೆ ಒತ್ತು ನೀಡುವುದು ನಗದು ಅಮಾನ್ಯತೆಯ ಪ್ರಮುಖ ಉದ್ದೇಶಗಳಲ್ಲೊಂದೆಂದು ಅರುಣ್‌ಜೇಟ್ಲಿ ಬುಧವಾರ ಮತ್ತೆ ಪುನರುಚ್ಚರಿಸಿದ್ದಾರೆ. ಆದರೆ ಎಪ್ರಿಲ್‌ನಲ್ಲಿ, ಅದರ ಹಿಂದಿನ ತಿಂಗಳಿಗೆ ಹೋಲಿಸಿದರೆ ಡಿಜಿಟಲ್ ಹಣಕಾಸು ವ್ಯವಹಾರವು ಶೇ. 27ರಷ್ಟು ಕುಸಿದಿರುವುದನ್ನು ಸರಕಾರಿ ಅಂಕಿಅಂಶಗಳು ಬಹಿರಂಗಪಡಿಸಿವೆ.

ನೋಟು ನಿಷೇಧದಿಂದ ಮುಳುಗುತ್ತಿರುವ ಬ್ಯಾಂಕ್‌ಗಳು ಬಡವರು, ಮಧ್ಯಮವರ್ಗದ ಹಣವನ್ನು ತನ್ನ ತಿಜೋರಿಯೊಳಗೆ ತುಂಬಿಸಿಕೊಂಡಿತು. ಕಾರ್ಪೊರೇಟ್ ಶಕ್ತಿಗಳು ಇನ್ನಷ್ಟು ಬಲಾಢ್ಯಗೊಂಡವು. ಗ್ರಾಮೀಣ ಭಾರತ ಇನ್ನಷ್ಟು ಹಿಂದಕ್ಕೆ ಹೋಯಿತು. ನೋಟು ನಿಷೇಧಕ್ಕೆ ಮುನ್ನ ಕೆಲವು ಕಾರ್ಪೊರೇಟ್ ಶಕ್ತಿಗಳು ಮತ್ತು ರಾಜಕಾರಣಿಗಳು ತಮ್ಮ ನಗದನ್ನು ಬೇರೆ ಬೇರೆ ರೀತಿಯಲ್ಲಿ ಬದಲಿಸಿಕೊಂಡಿರುವುದು ಈಗಾಗಲೇ ಬೆಳಕಿಗೆ ಬಂದಿದೆ.

ದೇಶದ ಹಿತಾಸಕ್ತಿ ನೋಟು ನಿಷೇಧದಿಂದ ಆಗಲಿಲ್ಲ ಎಂದಾದರೆ, ಇಂತಹದೊಂದು ಜನವಿರೋಧಿ ನಿರ್ಧಾರವನ್ನು ಸರಕಾರ ತಳೆಯಲು ಕಾರಣವೇನು? ತನ್ನ ಅಧಿಕಾರಾವಧಿಯಲ್ಲಿ ಹಗರಣಗಳೇ ನಡೆದಿಲ್ಲ ಎಂದು ಮೋದಿ ಪದೇ ಪದೇ ಹೇಳುತ್ತಾರೆ. ಆದರೆ ‘ನೋಟು ನಿಷೇಧ’ವೆನ್ನುವ ಹಗರಣ, ಈ ದೇಶವನ್ನು ಸರ್ವ ರೀತಿಯಲ್ಲೂ ದಶಕಗಳ ಹಿಂದಕ್ಕೆ ಕೊಂಡೊಯ್ದಿದೆ. ಈ ಹಗರಣ, ಈ ದೇಶದ ಪ್ರಧಾನಿಯಿಂದ ಸ್ಪಷ್ಟನೆಯನ್ನು ಬೇಡುತ್ತಿದೆ. ಅದನ್ನು ನೀಡಲು ಸಾಧ್ಯವಿಲ್ಲ ಎಂದಾದರೆ ರಾಜೀನಾಮೆಯನ್ನಾದರೂ ಮೋದಿ ನೀಡಲೇಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News