ಸೌಲಭ್ಯ ಪಡೆದವರಿಗೆ ಡಿಸಿಸಿ ಬ್ಯಾಂಕ್‌ಗಳಿಂದ ಶೂನ್ಯ ಬಡ್ಡಿದರದ ಸಾಲ!
ಶಿವಮೊಗ್ಗ, ಸೆ.1: ಸಹಕಾರಿ ಬ್ಯಾಂಕ್‌ಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ವರೆಗೆ ರೈತರಿಗೆ ನೀಡಲಾಗುತ್ತಿರುವ ಸಾಲಸೌಲಭ್ಯವು, ಈ ಮೊದಲು ಸೌಲಭ್ಯ ಪಡೆದುಕೊಂಡವರಿಗೆ ನೀಡಲಾಗುತ್ತಿದೆ. ಹೊಸ ರೈತರಿಗೆ ಸಮರ್ಪಕವಾಗಿ ಸೌಲಭ್ಯ ದೊರಕುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಶೂನ್ಯ ಬಡ್ಡಿ ದರದ ಸಾಲಸೌಲಭ್ಯ ರೈತರಿಗೆ ಸಮರ್ಪಕವಾಗಿ ದೊರಕುವಂತಾಗಬೇಕು. ಆದರೆ, ಸಹಕಾರಿ ಬ್ಯಾಂಕ್‌ಗಳಲ್ಲಿ ಈ ಹಿಂದೆ ಸೌಲಭ್ಯ ಪಡೆದುಕೊಂಡವರಿಗೆ ಮತ್ತೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಹೊಸಬರಿಗೆ ಸೌಲಭ್ಯ ಕಲ್ಪಿಸುತ್ತಿಲ್ಲ. ಇದಕ್ಕೆ ಕಾರಣವೇನು? ಬರೀ ಸಾಲ ಪಡೆದುಕೊಂಡವರಿಗೆ ಸಾಲ ನೀಡಿದರೆ ಏನರ್ಥ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಈ ಬಗ್ಗೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರು ನೀಡಿದ ಸ್ಪಷ್ಟನೆಗೆ ಕಾಗೋಡು ತಿಮ್ಮಪ್ಪ ಮರು ಪ್ರಶ್ನೆ ಹಾಕಿ, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕೇವಲ ಒಂದಿಬ್ಬರು ಹೊಸ ರೈತರು ಮಾತ್ರ ಶೂನ್ಯ ಬಡ್ಡಿದರ ಸಾಲ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಈ ಪ್ರಮಾಣ ಕನಿಷ್ಠ 15ರಿಂದ 25 ಜನರಿಗಾದರೂ ದೊರಕುವಂತಾಗಬೇಕು. ಸಾಲ ಕೊಟ್ಟವರಿಗೆ ಸಾಲ ನೀಡುವ ಪರಿಪಾಠ ನಿಲ್ಲಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸರಕಾರ ಶೂನ್ಯ ಬಡ್ಡಿ ದರ ಸಾಲ ಸೌಲಭ್ಯ ಯೋಜನೆ ಜಾರಿಗೊಳಿಸಿದ ನಂತರ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಎಷ್ಟು ರೈತರಿಗೆ ಸಾಲಸೌಲಭ್ಯ ಕಲ್ಪಿಸಲಾಗಿದೆ. ಎಷ್ಟು ಜನರಿಗೆ ಪುನರಾವರ್ತನೆ ಸಾಲ ನೀಡಲಾಗಿದೆ. ಹೊಸಬರ ಸಂಖ್ಯೆಯೆಷ್ಟು ಎಂಬಿತ್ಯಾದಿ ವಿವರಗಳನ್ನು ಸಹಕಾರಿ ಇಲಾಖೆ, ಡಿಸಿಸಿ ಬ್ಯಾಂಕ್‌ಗಳಿಂದ ಪಡೆದು ತಮಗೆ ಸಲ್ಲಿಸಿ. ಜೊತೆಗೆ ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಅಲ್ಲದೆ ಮುಂದೆ ಹೊಸ ರೈತರಿಗೆ ಶೂನ್ಯ ಬಡ್ಡಿದರದ ಸಾಲ ನೀಡಬೇಕು. ಇದರಲ್ಲಿ ಮಹಿಳೆ ರೈತರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಾಗೆಯೇ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕುಟುಂಬದಲ್ಲಿ ಓರ್ವರನ್ನಾದರೂ ಸಹಕಾರಿ ಸಂಘಗಳಲ್ಲಿ ಕಡ್ಡಾಯವಾಗಿ ಷೇರುದಾರರನ್ನಾಗಿ ಮಾಡಬೇಕೆಂಬ ಸರಕಾರದ ಘೋಷಣೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಅನುಮತಿ: ಡಿಸಿಸಿ ಬ್ಯಾಂಕ್‌ಗೆ ನಬಾರ್ಡ್‌ನಿಂದ ಸ್ಥಗಿತಗೊಂಡಿದ್ದ ಹಣಕಾಸು ಸೌಲಭ್ಯವು ಪಸ್ತುತ ವರ್ಷದಿಂದ ಮತ್ತೆ ದೊರಕಲಿದೆ. ಈ ಬಗ್ಗೆ ನಬಾರ್ಡ್‌ನಿಂದ ಮಾಹಿತಿ ಲಭ್ಯವಾಗಿದೆ. ಈ ಹಣ ದೊರಕಿದರೆ ಹೆಚ್ಚಿನ ರೈತರಿಗೆ ಸಾಲಸೌಲಭ್ಯ ಕಲ್ಪಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಮುಖ್ಯಸ್ಥರು ಸಚಿವರಿಗೆ ತಿಳಿಸಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಉಪಾಧ್ಯಕ್ಷ ವೇದಾ ವಿಜಯಕುಮಾರ್, ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್, ಜಿಪಂ ಸಿಇಓ ರಾಕೇಶ್‌ಕುಮಾರ್ ಉಪಸ್ಥಿತರಿದ್ದರು.
ಷೇರು ಹಣದ ಮೊತ್ತ ಹಿಂದಿರುಗಿಸಲು ಎಂಎಲ್‌ಸಿ ಆಗ್ರಹ
"ಸಹಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದ ವೇಳೆ ಶೇ. 10 ರಷ್ಟು ಮೊತ್ತವನ್ನು ಷೇರಾಗಿ ಇಟ್ಟುಕೊಳ್ಳಲಾಗುತ್ತಿದೆ. ಸಾಲ ತಿರುವಳಿಯ ವೇಳೆ ಈ ಷೇರು ಮೊತ್ತವನ್ನು ಸಾಲದ ಮೊತ್ತಕ್ಕೆ ಸರಿದೂಗಿಸುತ್ತಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಸಾಲದ ಮೊತ್ತಕ್ಕೆ ಈ ಷೇರು ಮೊತ್ತ ಸರಿ ಹೊಂದಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಈ ಕುರಿತಂತೆ ಡಿ.ಸಿ.ಸಿ. ಬ್ಯಾಂಕ್ ಹಾಗೂ ಸಹಕಾರಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು" ಎಂದು ವಿಧಾನಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್ ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಾಯಿಸಿದರು.