ಚಿನ್ನಾಭರಣ ಕಳವು ಪ್ರಕರಣ: ಆರೋಪಿಗಳಿಗೆ ಸಜೆ
ಮಡಿಕೇರಿ, ಸೆ.1: ದಕ್ಷಿಣ ಕೊಡಗಿನ ಸುಳುಗೋಡಿನ ಮನೆಯೊಂದರಲ್ಲಿ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಸಜೆ ವಿಧಿಸಿ ಪೊನ್ನಂಪೇಟೆ ಜೆಎಂಎಫ್‍ಸಿ ನ್ಯಾಯಾಲಯ ತೀರ್ಪನ್ನು ನೀಡಿದೆ.
ಮೈಸೂರಿನ ನಂಜನಗೂಡು ರಸ್ತೆಯ ತರಕಾರಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಮೂಲತಃ ಸುಂಟಿಕೊಪ್ಪದ ಉಲುಗುಲಿ ಗ್ರಾಮದ ಕೆ.ಜಿ. ಸುರೇಶ್, ಕೊಣನೂರು ಹೋಬಳಿಯ ಹಂಡ್ರಂಗಿ ಗ್ರಾಮದ ಎಚ್.ಆರ್. ಗಿರೀಶ್ ಮತ್ತು ಅದೇ ಗ್ರಾಮದ ರಾಜು ಎಂಬವ ಶಿಕ್ಷೆಗೊಳಗಾದ ವ್ಯಕ್ತಿಗಳು.
ಪ್ರಕರಣ: ಪ್ರಸಕ್ತ ಸಾಲಿನ ಮೇ. 20 ರಂದು ಪೊನ್ನಂಪೇಟೆಯ ಸುಳುಗೋಡು ಗ್ರಾಮದ ಕೆ.ಯು.ಬೋಪಯ್ಯ ಎಂಬವವರು ತಮ್ಮ ಸಹೋದರನ ವಿವಾಹ ಸಮಾರಂಭಕ್ಕೆ ಕುಟುಂಬ ಸಮೇತ ಪೊನ್ನಂಪೇಟೆ ಕೊಡವ ಸಮಾಜಕ್ಕೆ ತೆರಳಿ, ಮಧ್ಯರಾತ್ರಿ ಮನೆಗೆ ಹಿಂದಿರುಗಿದ್ದರು. ಈ ವೇಳೆ ಮನೆಯ ಹಿಂಬಾಗಿಲಿನ ಬೀಗ ಮುರಿದು ಬೋಪಯ್ಯ ಅವರ ತಾಯಿ ಮತ್ತು ಅವರ ಸಹೋದರಿಯರಿಗೆ ಸೇರಿದ ಸುಮಾರು 2.5 ಕೆ.ಜಿ ಚಿನ್ನಾಭರಣಗಳು ಹಾಗೂ 4 ಲಕ್ಷ ನಗದು ಹಣವನ್ನು ಕಳವು ಮಾಡಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಆಧರಿಸಿ ತನಿಖಾಧಿಕಾರಿಗಳಾದ ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಪಿ.ಕೆ ರಾಜು ನೇತೃತ್ವದ ತಂಡ ತನಿಖೆ ನಡೆಸಿತು. ಆರೋಪಿಗಳನ್ನು ಬಂಧಿಸಿ, 1.30 ಕೋಟಿ ರೂ. ಮೌಲ್ಯದ 5.112 ಕೆ.ಜಿ. ಚಿನ್ನಾಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿತ್ತು.
ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಪೊನ್ನಂಪೇಟೆ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಗೌಡ ಅವರು, ಆರೋಪಿ ಕೆ.ಜಿ.ಸುರೇಶನಿಗೆ 3 ವರ್ಷ, ಎಚ್.ಆರ್.ಗಿರೀಶನಿಗೆ 1 ವರ್ಷ ಮತ್ತು ರಾಜುವಿಗೆ 3 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪುನ್ನು ನೀಡಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರಂಜಿತ್ ವಾದ ಮಂಡಿಸಿದ್ದರು. ಅತ್ಯಂತ ಕ್ಷಿಪ್ರಗತಿಯಲ್ಲಿ ತನಿಖೆ ನಡೆಸಿ ಪ್ರಕರಣವನ್ನು ಭೇದಿಸಿದ ಗೋಣಿಕೊಪ್ಪ ವೃತ್ತ ನಿರೀಕ್ಷಕ ಪಿ.ಕೆ ರಾಜು ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ ಅವರಿಗೆ ನಗದು ಬಹುಮಾನವನ್ನು ಘೋಷಿಸಿರುವುದಾಗಿ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.