ಸೈನ್ಯದಲ್ಲಿ ಸೇವೆ ಸಲ್ಲಿಸುವುದು ನಮ್ಮ ಪೂರ್ವ ಜನ್ಮದಲ್ಲಿ ಮಾಡಿದ ಪುಣ್ಯಫಲ: ಯೋಧ ಸುಭಾಷ್ ಚಂದ್ರ ತೇಜಸ್ವಿ
ಸಾಗರ,ಸೆ.1: ಸೈನ್ಯದಲ್ಲಿ ಸೇವೆ ಸಲ್ಲಿಸುವುದು ನಮ್ಮ ಪೂರ್ವ ಜನ್ಮದಲ್ಲಿ ಮಾಡಿದ ಪುಣ್ಯಫಲದಿಂದ ಎನ್ನುವುದು ನನ್ನ ಭಾವನೆ ಎಂದು ಸಿಯಾಚಿನ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ಸುಭಾಷ್ ಚಂದ್ರ ತೇಜಸ್ವಿ ತಿಳಿಸಿದರು.
ಇಲ್ಲಿನ ಸಮೀಪದ ಕುಗ್ವೆ-ಅಂಬಾಪುರದ ವಿನಾಯಕ ಸ್ನೇಹಕೂಟ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 22ನೆ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಸಂಸ್ಥೆ ವತಿಯಿಂದ ನೀಡಲಾದ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
ಭಾರತೀಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುವ ಯೋಧರಿಗೆ ಸಿಯಾಚಿನ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವುದು ಜೀವನದಲ್ಲಿ ಮರೆಯಲಾಗದ ಅನುಭವ ನೀಡುತ್ತದೆ. ಶತ್ರುಗಳು ಯಾವ ರೂಪದಲ್ಲಿ ಬರುತ್ತಾರೆ ಎಂದು ಕಾಯುತ್ತಾ, ಮಂಜಿನ ಬೆಟ್ಟದಲ್ಲಿ ಕೆಲಸ ಮಾಡುವಾಗ ಪ್ರಾಕೃತಿಕ ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸೈನಿಕರಿಗೆ ಭಾರತ ನೆಲದ ರಕ್ಷಣೆಯೆ ಪ್ರಮುಖವಾಗಿರುವುದರಿಂದ ಎಂತಹ ಸವಾಲನ್ನು ಬೇಕಾದರೂ ಎದುರಿಸುವ ಆತ್ಮಸ್ಥೈರ್ಯ ಬಂದಿರುತ್ತದೆ ಎಂದರು.
ನಾವು ಹುಟ್ಟಿದ ಊರಿನಲ್ಲಿ ನಮ್ಮ ಸೇವೆಯನ್ನು ಸ್ಮರಿಸಿ ಸನ್ಮಾನಿಸುತ್ತಿರುವುದು ಸಂತೋಷದ ಸಂಗತಿ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಲು ಪ್ರೇರಣೆ ನೀಡಿದ ಗಣೇಶೋತ್ಸವ ಆಚರಣೆ ಇಂದು ಗ್ರಾಮೀಣ ಭಾಗದಲ್ಲಿ ಸಾಮರಸ್ಯ ವಾತಾವರಣ ಸ್ಥಾಪಿಸಲು ಕಾರಣವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಲೋಕೇಶ್ ಹುಣಸೂರು ಮಾತನಾಡಿ, ನಮ್ಮ ಗ್ರಾಮದ ಯುವಕರು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನುವುದೆ ನಮ್ಮ ಗ್ರಾಮಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಮಕ್ಕಳಿಗೆ ಭಾರತ ದೇಶ, ಗಡಿ ಕಾಯುವ ಸೈನಿಕರು ಇನ್ನಿತರೆ ಬಗ್ಗೆ ಪ್ರಾಥಮಿಕ ಹಂತದಲ್ಲಿಯೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಈ ವೇಳೆ ಮಾಜಿ ಯೋಧರಾದ ಲಿಂಗರಾಜ್ ಕುಗ್ವೆ ಹಾಗೂ ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಸುಧಾರಣಾ ಸಮಿತಿ ಅಧ್ಯಕ್ಷ ಹಾಲಪ್ಪ, ಶ್ರೀ ಯುವಕ ಸಂಘದ ಅಧ್ಯಕ್ಷ ಸುರೇಂದ್ರ ಕಲ್ಲಿ, ಈಶ್ವರ ನಾಯಕ್ ಕುಗ್ವೆ, ಗ್ರಾಮ ಪಂಚಾಯ್ತಿ ಸದಸ್ಯ ಹುಚ್ಚಪ್ಪ ಅಂಬಾಪುರ, ನಾಗರಾಜ ಹುಣಸೂರು, ಸೈದೂರು ಬಸವರಾಜ್ ಇನ್ನಿತರರು ಹಾಜರಿದ್ದರು.