ತಪ್ಪು ಮಾಹಿತಿ ನೀಡಿದ ವಿಧಾನಪರಿಷತ್ ಸದಸ್ಯರ ವಿರುದ್ದ ಶಿಸ್ತುಕ್ರಮಕ್ಕೆ ಕೆ.ಎಸ್.ಈಶ್ವರಪ್ಪ ಆಗ್ರಹ
ಶಿವಮೊಗ್ಗ, ಸೆ. 2: ಸಚಿವ ಆರ್.ಬಿ.ತಿಮ್ಮಾಪುರ ಅವರು ಸುಳ್ಳು ವಾಸದ ವಿಳಾಸ ನೀಡಿ ಸಾವಿರಾರು ರೂ. ಟಿಎ-ಡಿಎ ಪಡೆದಿದ್ದು, ನೈತಿಕ ಹೊಣೆಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ತಿಮ್ಮಾಪುರ 2016ರ ಅ. 7 ರಂದು 8 ಸಾವಿರ, 2016ರ ಅ.14 ರಂದು 36,900 ಹಾಗೂ 2016ರ ಅ.21 ರಂದು 34,800 ರೂ.ಗಳನ್ನು ಸರ್ಕಾರಿದಂದ ಪಡೆದಿದ್ದಾರೆ ಎಂದು ಆರೋಪಿಸಿದರು.
ಇದೇ ರೀತಿ 8 ಜನ ವಿಧಾನಪರಿಷತ್ ಸದಸ್ಯರು ಸುಳ್ಳು ವಿಳಾಸ ನೀಡಿ ಸರ್ಕಾರದಿಂದ ಟಿಎ, ಡಿಎ ಪಡೆದಿರುವುದು ರಾಜ್ಯದ ಇತಿಹಾಸದಲ್ಲೇ ಪ್ರಥಮವಾಗಿದೆ. ಇದು ನೈತಿಕವಾಗಿ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಇವರ ವಿರುದ್ದ ಮುಖ್ಯಮಂತ್ರಿಗಳು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ವಿಧಾನಸಭೆಗೆ ಆಯ್ಕೆಯಾಗಿರುವ ಸಚಿವ ತಿಮ್ಮಾಪುರ ಬಾಗಲಕೋಟೆ ಮತದಾರರಾಗಿದ್ದು, ಸುಳ್ಳುದಾಖಲೆ ನೀಡಿರುವ ಹಿನ್ನೆಲೆಯಲ್ಲಿ ಅವರು ಬೆಂಗಳೂರು ಮಹಾನಗರ ಪಾಲಿಕೆ ಮತದಾರರಾಗಿದ್ದಾರೆ. ಆದರೂ ಸಹಾ ಬಾಗಲಕೋಟೆ ಜಿಲ್ಲೆಯ ಮುಧೋಳ್ ತಾಲೂಕು ಮತ್ತೂರು ಗ್ರಾಮದ ನಿವಾಸಿಯಾಗಿ ಮತದಾರನ ಹಕ್ಕು ಪಡೆದು, ಕೌನ್ಸಿಲ್ ರಿಜಿಸ್ಟ್ರಾರ್ ಬಳಿ ಇದುವರೆಗೂ 68 ಸಾವಿರದ 380 ರೂ. ಹಣ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕೇವಲ ಸಾಗರಕ್ಕೆ ಕಂದಾಯ ಸಚಿವರಾಗಿರುವಂತಿದೆ. ಅವರು ಕೇವಲ ಸಾಗರದಲ್ಲಿ ಮಾತ್ರ ಹಕ್ಕುಪತ್ರ, ನಿವೇಶನ ಮತ್ತು ಮನೆಗಳನ್ನು ಮಂಜೂರು ಮಾಡುತ್ತಿದ್ದಾರೆ. ಆದರೆ ಅವರು ರಾಜ್ಯದ ಇತರೆ ಗ್ರಾಮೀಣ ಭಾಗದಲ್ಲಿ ವಾಸಿಸುವ ಬಡವರು ಮತ್ತು ನಗರ ಭಾಗದಲ್ಲಿ ವಾಸಿಸುವ ಬಡವರನ್ನು ಮರೆತಂತಿದೆ ಎಂದು ದೂರಿದರು.