×
Ad

‘ಮೌಢ್ಯ ಪ್ರತಿಬಂಧಕ ಕಾಯ್ದೆ’ ಜಾರಿಗೆ ಆಗ್ರಹ

Update: 2017-09-02 18:18 IST

ಬೆಂಗಳೂರು, ಸೆ. 2: ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗಾಗಿ ರಾಜ್ಯ ಸರಕಾರ ಮೂರು ದಿನಗಳ ವಿಶೇಷ ಅಧಿವೇಶನ ಕರೆದು, ವಿಸ್ತೃತ ಚರ್ಚೆ ನಡೆಸಿ ವಿಪಕ್ಷಗಳ ಸಹಮತದೊಂದಿಗೆ ಜನರ ಹಿತದೃಷ್ಟಿಯಿಂದ ಕೂಡಲೇ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ಮಠಾಧೀಶರ ವೇದಿಕೆ ನೇತೃತ್ವದಲ್ಲಿ ಸೆ.4ರಿಂದ 7ರ ವರೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ‘ವೌಢ್ಯಾಚರಣೆ ಅಳಿಯಲಿ, ಮಾನವೀಯತೆ ಉಳಿಯಲಿ, ಮೌಢ್ಯ ಮುಕ್ತ ಕರ್ನಾಟಕದತ್ತ ಮುನ್ನಡೆಯೋಣ’ ಎಂಬ ಘೋಷಣೆಯಡಿ ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ.

ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಸ್ವಾಮಿ, ಬೇಲಿಮಠದ ಶಿವರುದ್ರ ಸ್ವಾಮಿ, ಒಕ್ಕಲಿಗರ ಮಠದ ಚಂದ್ರಶೇಖರ ಸ್ವಾಮಿ, ಗುಳೇದಗುಡ್ಡದ ಗುರುಸಿದ್ದೇಶ್ವರ ಮಠದ ಬವಸರಾಜ ಪಟ್ಟದಾರ್ಯ, ಪಂಚಮಸಾಲಿ ಮಠದ ಜಯಮೃತ್ಯುಂಜಯಸ್ವಾಮಿ ಸೇರಿದಂತೆ ರಾಜ್ಯದ ಪ್ರಮುಖ ಮಠಾಧೀಶರು, ಇಸ್ಲಾಂ-ಬೌದ್ಧ ಧರ್ಮಗುರುಗಳು ಪಾಲ್ಗೊಳ್ಳಲಿದ್ದಾರೆ.

ಮೌಢ್ಯ ಪ್ರತಿಬಂಧಕ ಕಾಯ್ದೆ ಕರಡಿನಲ್ಲಿ ತಳ ಸಮುದಾಯದ ಆಚರಣೆಗಳಷ್ಟೆ ಉಲ್ಲೇಖಿಸಿದ್ದು, ಪ್ರತಿಷ್ಠಿತ ವರ್ಗದ ಆಚರಣೆಗಳನ್ನು ಸೇರ್ಪಡೆಗೊಳಿಸಬೇಕು. ಪಂಕ್ತಿಭೇದ, ಮಡೆ-ಮಡೆಸ್ನಾನ, ಎಡೆಸ್ನಾನ, ಫಲಜ್ಯೋತಿಷ್ಯ, ಫಲವಾಸ್ತು ಸೇರಿದಂತೆ ಇನ್ನಿತರ ವೌಢ್ಯಾಚರಣೆಗಳನ್ನು ನಿಷೇಧಿಸಬೇಕು.

ರಾಜ್ಯ ಸರಕಾರ ತರಲು ಉದ್ದೇಶಿಸಿರುವ ಅನುಮೋದಿತ ಮಸೂದೆ ಕರಡನ್ನು ವೆಬ್‌ಸೈಟ್, ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕ ಚರ್ಚೆಗೆ ಪ್ರಚುರಪಡಿಸಬೇಕೆಂದು ಆಗ್ರಹಿಸಿ ಸತ್ಯಾಗ್ರಹ ಕೈಗೊಳ್ಳಲಾಗುವುದು. ಸೆ.6ರೊಳಗೆ ರಾಜ್ಯ ಸರಕಾರ ಸ್ಪಂದಿಸದಿದ್ದರೆ ಸೆ.7ರಿಂದ ಮಠಾಧೀಶರ ವೇದಿಕೆ ನೇತೃತ್ವದಲ್ಲಿ ಉಗ್ರ ಹೋರಾಟಕ್ಕೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

‘ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕರಡು ಪರಿಶೀಲನೆಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಿದೆ. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಸಾಧ್ಯತೆಗಳಿವೆ. ಇಂತಹದೊಂದು ಚಾರಿತ್ರಿಕ ಮಹತ್ವವುಳ್ಳ ಶಾಸನ ಜಾರಿಗೆ ರಾಜ್ಯ ಸರಕಾರದ ನಿಲುವು ಅಭಿನಂದನೀಯ’

-ವೀರಭದ್ರ ಚೆನ್ನಮಲ್ಲ ಸ್ವಾಮಿ ನಿಡುಮಾಮಿಡಿ ಮಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News