ಮುಂದಿನ ಮೂರು ವರ್ಷಗಳಲ್ಲಿ ವಿದೇಶಕ್ಕೆ ಯೂರಿಯಾ ರಫ್ತು : ಸಚಿವ ಅನಂತಕುಮಾರ್
ಬೆಂಗಳೂರು, ಸೆ.2: ರಸಗೊಬ್ಬರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸಿದ್ದು, ಮುಂದಿನ ಮೂರು ವರ್ಷಗಳಲ್ಲಿ ವಿದೇಶಗಳಿಗೆ ಯೂರಿಯಾ ರಫ್ತು ಮಾಡಲು ದೇಶ ಸನ್ನದ್ದುಗೊಳ್ಳಲಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್‌ಕುಮಾರ್ ಹೇಳಿದ್ದಾರೆ.
ಶುಕ್ರವಾರ ನಗರದ ಜಿಕೆವಿಕೆ ಆವರಣದಲ್ಲಿ ಕೃಷಿ ಅನುಸಂಧಾನ ಪರಿಷತ್ ಸಹಯೋಗದಲ್ಲಿ ಕೃಷಿ ವಿವಿ ಆಯೋಜಿಸಿದ್ದ ಸಂಕಲ್ಪ ಸಿದ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ಥಗಿತಗೊಂಡಿರುವ ತಲ್ಲಿಚೇರಿ, ಗೋರಖ್‌ಪುರ ಹಾಗೂ ರಾಮಗುಂಡಂ ರಸಗೊಬ್ಬರ ಉತ್ಪಾದನೆ ಘಟಕಗಳನ್ನು ಮೂರು ವರ್ಷಗಳಲ್ಲಿ ಪುನಶ್ಚೇತನಗೊಳಿಸಲಾಗುವುದು. ನೆರೆಯ ರಾಷ್ಟ್ರಗಳು ಸೇರಿದಂತೆ ಏಷ್ಯಾ ರಾಷ್ಟ್ರಗಳಿಗೆ ಯೂರಿಯಾ ರಫ್ತು ಮಾಡಲಾಗುವುದು ಎಂದರು.
ರೈತರ ಆದಾಯವನ್ನು 2022ರ ವೇಳೆಗೆ ದ್ವಿಗುಣಗೊಳಿಸುವ ಗುರಿ ಹೊಮದಲಾಗಿದೆ.ಇದಕ್ಕಾಗಿ ಏಳು ಅಂಶ ಗಳ ಕಾಯತಂತ್ರಗಳನ್ನು ರೂಪಿಸಲಾಗಿದೆ.ಈ ಮೂಲಕ ಆದಾಯವನ್ನು ಸಂಕಲ್ಪ ಸಿದ್ಧಿಯಾಗಿ ಪರಿವರ್ತಿಸಲು ಪಣ ತೊಡಲಾಗಿದೆ ಎಂದರು.
ಹವಾಮಾನ ವೈಪರೀತ್ಯದಿಂದಾಗುವ ಬೆಳೆ ನಷ್ಟ ತಪ್ಪಿಸಲು ರೈತರು ವೈಜ್ಞಾನಿಕ ಕೃಷಿ ಪದ್ದತಿಯನ್ನು ಬಳಸಿಕೊಳ್ಳಬೇಕು. ಲಭ್ಯ ಇರುವ ನೀರನ್ನು ಮಿತವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿ, ದೇಶದಲ್ಲಿನ ಬರ ಮತ್ತು ಬೆಳೆ ಹಾನಿಗೆ ಕೇಂದ್ರ ಸರಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳ ಲಾಭವನ್ನು ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಜಂಟಿ ಕಾರ್ಯದರ್ಶಿ ನೀರಜ್, ಕುಲಪತಿ ಎಚ್.ಶಿವಣ್ಣ ಸೇರಿದಂತೆ ಇತರರು ಇದ್ದರು.