ಸಂಪುಟ ವಿಸ್ತರಣೆ : ನನಗೆ ಯಾವುದೇ ಅಸಮಾಧಾನವಿಲ್ಲ - ಡಿ.ಕೆ.ಶಿವಕುಮಾರ್
ಬೆಂಗಳೂರು, ಸೆ. 2: ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟದ್ದು, ಅದಕ್ಕೆ ಅವರು ಯಾರೊಬ್ಬರನ್ನು ಕೇಳುವ ಅಗತ್ಯ ಇಲ್ಲ. ನನಗೆ ಈ ಬಗ್ಗೆ ಯಾವುದೇ ಅಸಮಾಧಾನವೂ ಇಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯನ್ನು ಯಾರನ್ನು ಕೇಳಿ ಮಾಡುವುದಿಲ್ಲ. ತಾನು ನಿನ್ನೆ ತುರ್ತು ಕಾರಣಕ್ಕಾಗಿ ಹೊಸದಿಲ್ಲಿಗೆ ತೆರಳಿದ್ದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಮಾಹಿತಿ ನೀಡಿದ್ದೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಸಂಬಂಧ ನನಗೆ ಯಾವುದೇ ಅಸಮಾಧಾನ, ಅತೃಪ್ತಿ ಇಲ್ಲ. ‘ದೊಡ್ಡವರ’ ಅಸಮಾಧಾನದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಶಿವಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಆದಾಯ ತೆರಿಗೆ ಇಲಾಖೆ ದಾಳಿ ಸಂಬಂಧ ಮೌನ ಮುರಿಯುವ ಕಾಲ ಇನ್ನೂ ಬಂದಿಲ್ಲ. ಐಟಿ ದಾಳಿ ಬಗ್ಗೆ ಸದ್ಯ ಈಗ ಏನೂ ಮಾತನಾಡುವುದಿಲ್ಲ. ನನ್ನ ಆಪ್ತರು, ಬೆಂಬಲಿಗರ ಮೇಲೆ ಐಟಿ ದಾಳಿ ನಡೆಯುತ್ತಿರುವುದರ ಬಗ್ಗೆ ನನಗೆ ನೋವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಬೃಹತ್ ಮೊತ್ತದ ಅಕ್ರಮ ಆಸ್ತಿ ಇದೆ ಎಂದು ಹೇಳಿದ್ದಾರೆ. ಈ ಬಗ್ಗೆ ಅವರ ಬಳಿ ದಾಖಲೆಗಳಿದ್ದರೆ ತೋರಿಸಲಿ. ಆದಾಯ ತೆರಿಗೆ ಇಲಾಖೆ ದಾಳಿಯ ಬಳಿಕ ತಾನೂ ಬಹಿರಂಗವಾಗಿಯೇ ಇದ್ದೇನೆ. ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವು ಮಾಧ್ಯಮಗಳಲ್ಲೂ ಐಟಿ ದಾಳಿ ಬಗ್ಗೆ ಅನಗತ್ಯ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ಸಾರ್ವಜನಿಕ ಜೀವನದಲ್ಲಿರುವ ತಾನು ಇದನ್ನೆಲ್ಲ ನೋಡಿಕೊಂಡು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ನಮ್ಮಲ್ಲೂ ಅಸ್ತ್ರಗಳಿವೆ. ಅವುಗಳನ್ನು ಸಮಯ ಬಂದಾಗ ಪ್ರಯೋಗಿಸುತ್ತೇವೆ ಎಂದು ಶಿವಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.