32 ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಸೆಪ್ಟೆಂಬರ್ ಅಂತ್ಯದೊಳಗೆ ಪ್ರಾರಂಭ: ವೈಎಸ್‍ವಿ ದತ್ತ

Update: 2017-09-02 13:41 GMT

ಕಡೂರು, ಸೆ. 2: ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು-ಚಿತ್ರದುರ್ಗ ಕಾಲುವೆ ಯೋಜನೆಯಡಿ ತಾಲೂಕಿನ 32 ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಸೆಪ್ಟೆಂಬರ್ ಅಂತ್ಯದೊಳಗೆ ಪ್ರಾರಂಭವಾಗಲಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.

 ಅವರು ಶನಿವಾರ ಪಟ್ಟಣದ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ಸೆ.5ಕ್ಕೆ ಟೆಂಡರ್ ಪ್ರಕ್ರಿಯೆಗೆ ಕೊನೆಯ ದಿನವಾಗಿದೆ. ಸೆ.14ಕ್ಕೆ ಟೆಂಡರ್ ತೆರೆಯುವುದು. ಸೆ.20ರ ವೇಳೆಗೆ ಕ್ಷೇತ್ರಕ್ಕೆ ಭಾರೀ ಯಂತ್ರಗಳು ಕಾಮಗಾರಿಗೆ ಮುಂದಾಗಲಿವೆ. ತರೀಕೆರೆ ತಾಲ್ಲೂಕಿನ ಅಜ್ಜಂಪುರದಿಂದ ಪ್ರಾರಂಭವಾಗುವ ಎರಡನೇ ಮುಖ್ಯ ಕಾಲುವೆ ತರೀಕೆರೆಯ ಸೊಲ್ಲಾಪುರ, ಚಿಣ್ಣಾಪುರ ಮೂಲಕ ಕ್ಷೇತ್ರದ ಆಸಂದಿ, ಗಡುಗನಹಳ್ಳಿ, ಆಡಿಗೆರೆ, ಅರೇಹಳ್ಳಿ, ಬಾಸೂರು, ಗೌಡನಕಟ್ಟೇಹಳ್ಳಿ, ನಾಗನಗೊಂಡನಹಳ್ಳಿ, ಚಿಕ್ಕಬಾಸೂರು, ಕಲ್ಲಾಪುರದವರೆಗಿನ 30 ಕಿ.ಮೀ. ಕಾಲುವೆ ಕಾಮಗಾರಿ ಮೊದಲ ಹಂತದಲ್ಲಿ ನಡೆಯಲಿದೆ.

ಎರಡನೇ ಹಂತದಲ್ಲಿ ಕಲ್ಲಾಪುರದಿಂದ ಪ್ರಾರಂಭವಾಗಿ ಯಳಗೊಂಡನಹಳ್ಳಿ, ಸಾದರಹಳ್ಳಿ, ವೈ. ಮಲ್ಲಾಪುರ, ವಿ.ಯರದಕೆರೆ, ಆಲಘಟ್ಟ, ಚಟ್ನಹಳ್ಳಿ, ಸಾಣೇಹಳ್ಳಿ, ಪರ್ವತನಹಳ್ಳಿ, ಮುಗಳೀಕಟ್ಟೆ, ವನಭೋಗಿಹಳ್ಳಿ, ಕುಂಕಾನಾಡು, ಜಿ. ವಡ್ಡರಹಟ್ಟಿ, ಉಪ್ಪಿನಹಳ್ಳಿವರೆಗೆ 35 ಕಿ.ಮೀ ಉದ್ದದ ಕಾಲುವೆ ನಿರ್ಮಾಣವಾಗಲಿದೆ. ಈ ಎರಡೂ ಹಂತದಲ್ಲಿ ಒಟ್ಟು 83 ಗ್ರಾಮಗಳ 33 ಕೆರೆಗಳು ನೀರಿನಿಂದ ಭರ್ತಿಯಾಗಲಿವೆ. ಸುಮಾರು 55 ಸಾವಿರ ಎಕರೆ ಕೃಷಿಭೂಮಿಗೆ ನೀರಾವರಿ ಸೌಲಭ್ಯ ಲಭ್ಯವಾಗಲಿದೆ ಎಂದ ಶಾಸಕರು ಒಟ್ಟಾರೆ ಮುಂದಿನ 18 ತಿಂಗಳ ಅವಧಿಯೊಳಗೆ ಕಾಮಗಾರಿ ಮುಕ್ತಾಯವಾಗುವ ವಿಶ್ವಾಸ ವ್ಯಕ್ತಪಡಿಸಿದರು.

ಕಾಮಗಾರಿಗಳ ನಿರ್ವಹಣೆಗೆ ಸಂಬಂಧಪಟ್ಟಂತೆ ಈಗಾಗಲೇ ಶಿವಮೊಗ್ಗದಲ್ಲಿ ವಿಭಾಗೀಯ ಕಛೇರಿಯನ್ನು ತೆರೆಯಲಾಗಿದೆ. ಈ ಕಛೇರಿಯು ಮೊದಲ ಹಂತದ ಕಾಮಗಾರಿಯನ್ನು ಅನುಷ್ಟಾನ ಮಾಡಿದರೆ, ಚಿತ್ರದುರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತೊಂದು ವಿಭಾಗೀಯ ಕಛೇರಿ ಎರಡನೇ ಹಂತದ ಕಾಮಗಾರಿಗಳನ್ನು ಅನುಷ್ಟಾನಗೊಳಿಸುತ್ತದೆ ಎಂದರು.

 ಇಷ್ಟೊಂದು ಅಭಿವೃದ್ಧಿ ಕೆಲಸಗಳು ನಡೆಯುತ್ತವೆ ಅಂಬ ನಂಬಿಕೆ ಕ್ಷೇತ್ರದ ಜನರಿಗಿದ್ದರೂ ತಮ್ಮ ಟೀಕಾಕಾರರಿಗೆ ಇರಲಿಲ್ಲ. ಅದಕ್ಕಾಗಿ ಅವರು ಪ್ರತಿದಿನ ಪ್ರವಾಸಿಮಂದಿರದಲ್ಲಿ ಕುಳಿತು ಟೀಕೆಗಳನ್ನು ಮಾಡುತ್ತಲೇ ಇದ್ದರು. ಈಗಲಾದರೂ ಟೀಕಾಕಾರರು ಪ್ರಾಂಜಲ ಮನಸ್ಸಿನಿಂದ ಅಭಿವೃದ್ಧಿಯನ್ನು ಒಪ್ಪಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಅಲ್ಲದೆ ಕಡೂರು ಮತ್ತು ಬೀರೂರು ಪಟ್ಟಣ ಸೇರಿದಂತೆ ಅಕ್ಕಪಕ್ಕದ 20 ಗ್ರಾಮಗಳಿಗೆ ಭದ್ರಾ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಗೂ ಕೂಡ ತಮ್ಮ ಶ್ರಮವಿದೆ. ಈ ಯೋಜನೆಗೆ ದಿವಂಗತ ಶಾಸಕ ಕೃಷ್ಣಮೂರ್ತಿ ಅಂಕುರಾರ್ಪಣೆ ಮಾಡಿದರೆ ನಂತರದ ಕೆಲಸಗಳನ್ನು ಮುಂದುವರೆಸಿಕೊಂಡು ಬಂದ ಶ್ರಮ ತಮ್ಮದೇ ಎಂದು ಪ್ರತಿಪಾದಿಸಿದರು.

ಈ ಸಂದರ್ಭ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್, ಮುಖಂಡರಾದ ಸೀಗೆಹಡ್ಲು ಹರೀಶ್, ಎಂ. ರಾಜಪ್ಪ, ಜಿಗಣೇಹಳ್ಳಿ ನೀಲಕಂಠಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News