‘ಲಿಂಗಾಯತ ಧರ್ಮ’ ಸೆ.4ಕ್ಕೆ ಸಮನ್ವಯ ಸಮಾವೇಶ
ಬೆಂಗಳೂರು, ಸೆ. 2: ಪಂಚಾಚಾರ್ಯ ವೀರಶೈವ ಐಕ್ಯತ ಮಂಡಳಿ ವತಿಯಿಂದ ಸೆ.4 ರಂದು ಬಾದಾಮಿಯಲ್ಲಿರುವ ಶಿವಯೋಗಿ ಮಂದಿರದಲ್ಲಿ ವೀರಶೈವ ಲಿಂಗಾಯತ ಸಮನ್ವಯ ಧರ್ಮದ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡಳಿ ಮುಖಂಡ ಸತೀಶ ಕೆಂಭಾವಿಮಠ್, ಹಲವಾರು ವರ್ಷಗಳಿಂದ ವೀರಶೈವ-ಲಿಂಗಾಯತ ಮಠಗಳು ಜಾತ್ಯತೀತವಾಗಿ ನಡೆದುಕೊಂಡು ಬರುತ್ತಿವೆ. ಆದರೆ, ಇತ್ತೀಚಿಗೆ ವೀರಶೈವ-ಲಿಂಗಾಯತರು ಬೇರೆ ಬೇರೆ ಎಂದು ಹಾಗೂ ಲಿಂಗಾಯತ ಸ್ವತಂತ್ರ ಧರ್ಮ ಎಂದು ಘೋಷಿಸಬೇಕು ಎಂದು ಚಳವಳಿ ಮಾಡುತ್ತಿರುವುದು ಸರಿಯಲ್ಲ ಎಂದರು.
ವೀರಶೈವ-ಲಿಂಗಾಯತರು ಎರಡೂ ಒಂದೇ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ರಾಜಕೀಯ ನಾಯಕರು ತಮ್ಮ ಸ್ವ ಹಿತಾಸಕ್ತಿಗಾಗಿ ನಮ್ಮ ಸಮುದಾಯ ಒಡೆಯುವ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ. ಅದಕ್ಕಾಗಿ ಸಮಾಜದಲ್ಲಿ ಗೊಂದಲದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಬಾದಾಮಿಯಲ್ಲಿ ನಡೆಯುತ್ತಿರುವ ಈ ಧರ್ಮ ಸಮಾವೇಶದಲ್ಲಿ ರಾಜ್ಯದ ಹಲವು ಮಠಾಧೀಶರು, 5 ಲಕ್ಷಕ್ಕೂ ಅಧಿಕ ಲಿಂಗಾಯತ-ವೀರಶೈವರು ಭಾಗವಹಿಸಲಿದ್ದಾರೆ. ಈ ಮೂಲಕ ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಸಂದೇಶ ನೀಡಲಾಗುತ್ತದೆ ಎಂದು ಅವರು ಹೇಳಿದರು.