ಸಾಧಕರನ್ನು ಪ್ರೋತ್ಸಾಹಿಸುವುದು ನಾಗರಿಕ ಸಮಾಜದ ಕರ್ತವ್ಯ: ಯಡಿಯೂರಪ್ಪ
ಬೆಂಗಳೂರು, ಸೆ. 2: ಕರ್ನಾಟಕದಲ್ಲಿ ಪ್ರತಿಭಾವಂತರಿಗೇನು ಕೊರತೆ ಇಲ್ಲ. ಹೀಗಾಗಿ, ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವುದು ನಾಗರಿಕ ಸಮಾಜದ ಕರ್ತವ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದ್ದಾರೆ.
ಶನಿವಾರ ನಗರದ ಗಾಂಧಿ ಭವನದಲ್ಲಿ ಡಾ.ಸಿ.ಸೋಮಶೇಖರ-ಎನ್.ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನವು ಆಯೋಜಿಸಿದ್ದ ‘ಸಂಸ್ಕೃತಿ ಸಂಗಮ-2017’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನಲ್ಲಿ ಸಾಧಕರ ಸಂಖ್ಯೆ ಅಪಾರ ಪ್ರಮಾಣದಲ್ಲಿದೆ. ಅವರನ್ನು ಗುರುತಿಸಿ, ಪ್ರೋತ್ಸಾಹಿಸಬೇಕಾದ ಅಗತ್ಯವಿದೆ. ನಮ್ಮ ಕಲೆ, ಸಾಹಿತ್ಯ, ಸಂಗೀತ ಭವ್ಯ ಪರಂಪರೆಯ ಪ್ರತೀಕ. ಬಸವಣ್ಣ, ಅಕ್ಕಮಹಾದೇವಿ, ಕನಕದಾಸ, ಪುರಂದರ ದಾಸರು ವಚನ ಹಾಗೂ ಕೀರ್ತನೆಗಳ ಮುಖಾಂತರ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಅನ್ನು ಉಳಿಸಿ ಬೆಳೆಸಬೇಕಿದೆ ಎಂದರು.
ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಜಾಗತಿಕರಣ, ಖಾಸಗಿಕರಣ ಹಾಗೂ ಉದಾರಿಕರಣ ನೀತಿಗಳಿಂದಾಗಿ ನಮ್ಮ ಕನ್ನಡ ಸಾಹಿತ್ಯ ಲೋಕದ ಅಂತಃಕರಣ ಮರೆಯಾಗಿದೆ. ಜಾನಪದ, ದಾಸ, ವಚನ ಸಾಹಿತ್ಯದಲ್ಲಿ ಅಂತಃಕರಣ ಅಧಿಕವಾಗಿತ್ತು. ಆದರೆ, ಆಧುನಿಕ ಸಾಹಿತ್ಯದಲ್ಲಿ ಅದನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯದ ಕೊಲೆಯಾಗುತ್ತಿದ್ದು, ತಂತ್ರಜ್ಞಾನ ದುರುಪಯೋಗವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಆಡಳಿತ ಹೆಚ್ಚಾಗಿ ಸಾಹಿತ್ಯ ಚಟುವಟಿಕೆಗಳು ಕಡಿಮೆಯಾಗಿವೆ. ಹೀಗಾಗಿ, ಇಲಾಖೆಗೆ ಸ್ವಾಯತ್ತತೆ ನೀಡುವುದು ಒಳ್ಳೆಯದು. ಬಜೆಟ್‌ನಲ್ಲಿ ಇಲಾಖೆಗೆ ನೀಡುವ ಅನುದಾನದಲ್ಲಿ ಕೇವಲ ಸಾಧಕರಿಗೆ ಪ್ರಶಸ್ತಿ, ಪುರಸ್ಕಾರ ನೀಡಿದರೆ ಸಾಲದು, ಸಾಹಿತ್ಯ ಕೃಷಿಗೂ ಹೆಚ್ಚಿನ ಆದ್ಯತೆ ನೀಡಬೇಕು. ಇಂತಹ ಇಲಾಖೆಗಳ ಆಡಳಿತಗಾರರಿಗೆ ಸಾಹಿತ್ಯದ ಪರಿಚಯವೂ ಇರಬೇಕು. ಬದುಕಿಗೆ ಮಾರ್ಗದರ್ಶನ ನೀಡುವ ಸಾಹಿತ್ಯ ಹೆಚ್ಚು ರಚನೆಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ.ಬಿ.ಎ.ವಿವೇಕ ರೈ, ಸಾಹಿತಿಗಳಾದ ಡಾ.ಗುರುಲಿಂಗ ಕಾಪಸೆ, ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ಹಾಗೂ ವಿದುಷಿ ಡಾ.ಎಂ.ಎಸ್.ಶೀಲಾ ಅವರಿಗೆ ‘ಸಂಸ್ಕೃತಿ ಸಂಗಮ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುತ್ತೂರು ಮಠದ ಪೀಠಾಧ್ಯಕ್ಷ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಪ್ರತಿಷ್ಠಾನದ ಅಧ್ಯಕ್ಷ ಡಾ.ಸಿ.ಸೋಮಶೇಖರ ಸೇರಿ ಮತ್ತಿತರರು ಉಪಸ್ಥಿತರಿದ್ದರು.