ಹಾಸನ: ಬಕ್ರೀದ್ ಹಬ್ಬ ಆಚರಣೆ
ಹಾಸನ,ಸೆ.2: ನಗರದ ಹೊಸಲೈನ್ ರಸ್ತೆ ಬಳಿ ಇರುವ ಈದ್ಗಾ ಮೈದಾನದಲ್ಲಿ ಬಕ್ರೀದ್ ಆಚರಣೆಯ ಅಂಗವಾಗಿ ಬೆಳಿಗ್ಗೆ ಮುಸ್ಲಿಂ ಭಾಂಧವರಿಂದ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.
ಈ ವೇಳೆ ನಗರಸಭೆ ಅಧ್ಯಕ್ಷ ಹೆಚ್.ಎಸ್. ಅನೀಲ್ ಕುಮಾರ್ ಸ್ಥಳಕ್ಕೆ ಆಗಮಿಸಿ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಕ್ರೀದ್ ಹಬ್ಬ ಒಂದು ಶ್ರೇಷ್ಠ ಹಬ್ಬವಾಗಿದೆ. ಎಲ್ಲಾ ಮುಸ್ಲಿಂ ಬಾಂಧವರು ಒಟ್ಟಿಗೆ ಸೇರಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಎಲ್ಲಾರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ನಗರಸಭೆ ಸದಸ್ಯ ಸಮೀರ್ ಮಾತನಾಡಿ, ತ್ಯಾಗ ಹಾಗೂ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಆಚರಣೆಯನ್ನು ಎಲ್ಲಾ ಮುಸ್ಲಿಮರು ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ. ಬಿಹಾರ ಮತ್ತು ಅಸ್ಸಾಮಿನ ಪೀಡಿತರಿಗೆ ಪರಿಹಾರ ನಿಧಿ ನೀಡುವ ನಿಟ್ಟಿನಲ್ಲಿ ಇಂದು ನಡೆದ ಪ್ರಾರ್ಥನೆ ಸಮಯದಲ್ಲಿ ಮುಸ್ಲಿಮರಿಂದ ದೇಣಿಗೆ ಸಂಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ರವಾನಿಸಲಾಗುವುದು. ಅಲ್ಲಿಂದ ನೇರವಾಗಿ ಸಂತ್ರಸ್ತರಿಗೆ ಪರಿಹಾರ ತಲುಪುವಂತೆ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯರು ಮತ್ತು ಕಿರಿಯರು ಒಟ್ಟಾಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.