ವಿಶಾಲ ದೃಷ್ಟಿಕೋನದಿಂದ ಸಾಹಿತ್ಯ ಸೃಷಿಸಲಿ: ಎಚ್‌ಎಸ್ವಿ ಸಲಹೆ
ಬೆಂಗಳೂರು, ಸೆ. 2: ಲೇಖಕರಾದವರೂ ಯಾವುದೇ ಒಂದು ಜಾತಿ, ಧರ್ಮ, ಮತ, ಪಂಥಕ್ಕೆ ಸೀಮಿತವಾಗಿರದೆ ವಿಶಾಲ ದೃಷ್ಟಿಕೋನದಿಂದ ಸಾಹಿತ್ಯ ಸೃಷ್ಟಿಸಬೇಕು ಎಂದು ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಹೇಳಿದ್ದಾರೆ.
ಶನಿವಾರ ಕುವೆಂಪು ಕಲಾಕೇಂದ್ರ ಟ್ರಸ್ಟ್ ಕಸಾಪದಲ್ಲಿ ಹಮ್ಮಿಕೊಂಡಿದ್ದ ತನ್ನ ಪ್ರಥಮ ವಾರ್ಷಿಕೋತ್ಸವ ಹಾಗೂ ವಿಮರ್ಶಕ ಹಾಗೂ ಲೇಖಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಕುವೆಂಪು ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕುವೆಂಪು, ಬೇಂದ್ರೆ, ಪುತಿನ, ನರಸಿಂಹ ಸ್ವಾಮಿ ಹೀಗೆ ಕನ್ನಡ ಸಾಹಿತಿಗಳ ನಡುವೆ ಪ್ರತ್ಯೇಕತೆ ಸೃಷಿಸುವ ಮೂಲಕ ಓದುಗರಲ್ಲಿ ಗೊಂದಲ ಸೃಷ್ಟಿಸುವ ಕೆಲಸವಾಗುತ್ತಿದೆ. ಲೇಖಕರು ಹಾಗೂ ಓದುಗರಲ್ಲಿ ಭೇದ ಇರಬಾರದು. ಲೇಖಕರು ಕನ್ನಡವನ್ನು ಬಳಸಿದರೆ, ಓದುಗರು ಕನ್ನಡವನ್ನು ಬೆಳೆಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಅಷ್ಟಕ್ಕೂ ಇಂದು ಸಾಹಿತಿಗಳ ಮಕ್ಕಳೆ ಅವರ ಪುಸ್ತಕವನ್ನು ಓದುತ್ತಿಲ್ಲ. ಇಂತಹ ವಾತಾವರಣದಲ್ಲಿ ಸಾಹಿತ್ಯದ ಬೇರುಗಳನ್ನು ಜಾಗೃತ ಮಾಡುವ ಜತೆಗೆ ಕನ್ನಡ ಪ್ರೇಮಿಗಳನ್ನು ಪ್ರೋತ್ಸಾಹಿಸುವ ಅಗತ್ಯತೆಯಿದೆ ಎಂದು ಹೇಳಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಹಲವರು ಕಣ್ಣುಪಟ್ಟಿ ಧರಿಸಿ, ಅಂಕಣ, ಕಥೆಗಳನ್ನು ಬರೆಯುತ್ತಿದ್ದಾರೆ. ತಮ್ಮ ವಿಚಾರಧಾರೆಗಳು ಮುಂದಿನ ಪೀಳಿಗೆ ಮುಟ್ಟಬೇಕೆಂಬ ದೃಢಸಂಕಲ್ಪ ಇರುವುದಿಲ್ಲ. ಯಾವುದೇ ಕೃತಿಯನ್ನು ವಿನಯದಿಂದ ಪ್ರವೇಶಿಸಿದಾಗ ಅದು ರುಚಿಸುತ್ತದೆ. ಅಹಂಕಾರದಿಂದ ಸಾಗಿದರೆ ಯಾವುದೇ ಕೃತಿ ಒಳಗೆ ಪ್ರವೇಶಿಸಿಕೊಳ್ಳುವುದಿಲ್ಲ. ನಮ್ಮ ಕಾಲದ ವಿವೇಕವನ್ನು ಪ್ರತಿನಿಧಿಸುವ ಶಕ್ತಿ ನರಹಳ್ಳಿ ಬರಹದಲ್ಲಿದೆ ಎಂದು ಹೇಳಿದರು.
ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಸಿ.ಕೆ. ರಾಮೇಗೌಡ, ಕರ್ನಾಟಕ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ. ತಿಮ್ಮಯ್ಯ, ಕುವೆಂಪು ಕಲಾಕೇಂದ್ರ ಟ್ರಸ್ಟ್ ಅಧ್ಯಕ್ಷ ಎಂ.ಕೆ ರಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.