ಬಿಜೆಪಿ ಚುನಾವಣಾ ಉಸ್ತುವಾರಿ ಜಾವಡೇಕರ್ ಸೆ.4ರಂದು ಕರ್ನಾಟಕ ರಾಜ್ಯಕ್ಕೆ ಆಗಮನ
ಬೆಂಗಳೂರು, ಸೆ. 2: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಬಿಜೆಪಿ ಗೆಲುವಿಗೆ ಅಗತ್ಯ ರಣತಂತ್ರ ರೂಪಿಸಲು ಕರ್ನಾಟಕ ಬಿಜೆಪಿಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಸೆ.4ರ ಸೋಮವಾರ ಹೊಸದಿಲ್ಲಿಯಿಂದ ರಾಜ್ಯಕ್ಕೆ ಆಗಮಿಸಲಿದ್ದಾರೆ.
ಸೆ.3ರ ಸಂಜೆ ಹೊಸದಿಲ್ಲಿಯಿಂದ ರಾಜ್ಯಕ್ಕೆ ಆಗಮಿಸಲಿರುವ ಜಾವಡೇಕರ್ ಅವರು, ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ, ಬಿಜೆಪಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪಕ್ಷದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆಂದು ಗೊತ್ತಾಗಿದೆ.
ಈ ಮಧ್ಯೆಯೇ ಆರೆಸೆಸ್ಸ್ ಮುಖಂಡರ ಹತ್ಯೆ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಲು ಆಗ್ರಹಿಸಿ ಸೆ.7ರಂದು ಪಕ್ಷದಿಂದ ಹಮ್ಮಿಕೊಂಡಿರುವ ‘ಮಂಗಳೂರು ಚಲೋ’ ರ್ಯಾಲಿಯನ್ನು ಯಶಸ್ವಿಗೊಳಿಸುವ ಬಗ್ಗೆಯೂ ಚರ್ಚಿಸಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.
ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಪಕ್ಷದ ಗೆಲುವಿಗೆ ಹಿರಿಯ ಮುಖಂಡರಾದ ಪ್ರಕಾಶ್ ಜಾವಡೇಕರ್ ಮತ್ತು ಪಿಯೂಶ್ ಗೋಯಲ್ ಅವರಿಗೆ ಕರ್ನಾಟಕ ಚುನಾವಣಾ ಉಸ್ತುವಾರಿ ನೀಡಿದ್ದಾರೆ. ಹೀಗಾಗಿ ಉಭಯ ಮುಖಂಡರು ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ್ದಾರೆಂದು ಹೇಳಲಾಗಿದೆ.