×
Ad

ಯಶಸ್ವಿ ಸಿನಿಮಾಗಳಿಗೆ ಬಾಲ್ಯದ ಅನುಭವ ಸ್ಫೂರ್ತಿ: ರಾಮದಾಸ್ ನಾಯ್ಡು

Update: 2017-09-02 23:14 IST

ಬೆಂಗಳೂರು, ಸೆ.2: ಕೋಲಾರದ ಕನ್ನಡ ಹಾಗೂ ತೆಲುಗು ಭಾಷೆಯ ಅಂತಸತ್ವ ಹಾಗೂ ಗ್ರಾಮೀಣ ಬದುಕಿನ ನನ್ನ ಅನುಭವಗಳಿಂದ ಸೃಜನಾತ್ಮಕ ಸಿನಿಮಾಗಳನ್ನು ನಿರ್ದೇಶಿಸಲು ಸಾಧ್ಯವಾಯ್ತು ಎಂದು ಹಿರಿಯ ನಿರ್ದೇಶಕ ಪಿ.ಆರ್.ರಾಮದಾಸ್ ನಾಯ್ಡು ತಿಳಿಸಿದ್ದಾರೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಬೆಳ್ಳೆ ಹೆಜ್ಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಆಂಧ್ರಪ್ರದೇಶಕ್ಕೆ ಅಂಟಿಕೊಂಡಿರುವ ಕೋಲಾರದ ರಾಯಲಪಾಡುವಿನಲ್ಲಿ ಹುಟ್ಟಿದ ನನಗೆ ಕನ್ನಡ ಹಾಗೂ ತೆಲಗು ಭಾಷೆಯ ಶ್ರೀಮಂತಿಕೆ ಬಾಲ್ಯದಲ್ಲಿಯೇ ದೊರಕಿತು. ಇದು ನನಗೆ ಚಿತ್ರಸಾಹಿತ್ಯ ಹಾಗೂ ಚಿತ್ರಕತೆ ಬರವಣಿಗೆಗೆ ಪ್ರೇರಣೆ ಒದಗಿಸಿತು ಎಂದು ತಿಳಿಸಿದರು.

ನನ್ನ ತಂದೆ ಪಿ.ರಾಮಪ್ಪ ನಾಯ್ಡು ಸ್ವಾತಂತ್ರ ಹೋರಾಟದ ಸಕ್ರಿಯ ಕಾರ್ಯಕರ್ತರಾಗಿದ್ದರು. ತಮ್ಮ ಇಡೀ ಬದುಕನ್ನು ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದರು. ಹೀಗಾಗಿ ಮನೆಯಲ್ಲಿ ಯಾವಾಗಲು ಸಮಾಜ ಸುಧಾರಕರ, ಸ್ವಾತಂತ್ರ ಹೋರಾಟಗಾರರ ಬದುಕಿನ ಕುರಿತು ಚರ್ಚೆ, ಜಾನಪದ ಹಾಗೂ ಹರಿದಾಸರ ಕೀರ್ತನೆಗಳನ್ನು ಸದಾ ಕೇಳುತ್ತಾ ಬೆಳೆದೆ. ಇದು ನನ್ನ ಬದುಕನ್ನು ರೂಪಿಸಿದವು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಲೇಜು ಶಿಕ್ಷಣ ಕಲಿಯಲು ಬೆಂಗಳೂರಿಗೆ ಬಂದ ನನಗೆ ವಾರಕ್ಕೊಂದು ಸಿನಿಮಾ ನೋಡುವ ಹವ್ಯಾಸ ಅಂಟಿಕೊಂಡಿತು. ಈ ವೇಳೆ ಇಟಲಿಯ ‘ಬೈಸಿಕಲ್ ಥೀವ್ಸ್ ’ ಸಿನಿಮಾ ನೋಡಿದೆ. ಇದು ನನ್ನ ಮೇಲೆ ಭಾರೀ ಪರಿಣಾಮ ಬೀರಿತು. ನಾನು ಚಿತ್ರರಂಗಕ್ಕೆ ಬರಲು ಈ ಚಿತ್ರದ ಕತೆಯೇ ಪ್ರೇರಣೆಯಾಯಿತು ಎಂದು ಅವರು ಹೇಳಿದರು.

ನನ್ನ ಮುಂದಿನ ಜೀವನವನ್ನು ಸಿನಿಮಾ ರಂಗದಲ್ಲೇ ರೂಪಿಸಿಕೊಳ್ಳಲು ನಿರ್ಧರಿಸಿದೆ. ಹೀಗಾಗಿ ಆದರ್ಶ ಫಿಲಂ ಶಾಲೆಗೆ ಸೇರಿದೆ. ಅಲ್ಲಿ ಕಾಶಿನಾಥ್ ಗೆಳೆಯನಾದ. ನಾವಿಬ್ಬರು ದೇಶ-ವಿದೇಶದ ಹಲವು ವಿಭಿನ್ನ ಸಿನಿಮಾಗಳನ್ನು ನೋಡಿ, ಆ ಸಿನಿಮಾಗಳಲ್ಲಿ ಮೂಡಿ ಬರುತ್ತಿದ್ದ ಪ್ರತಿ ದೃಶ್ಯಗಳನ್ನು ಪರಸ್ಪರ ವಿಶ್ಲೇಷಿಸುತ್ತಿದ್ದೆವು ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡರು.

1979ರಲ್ಲಿ ‘ಅಮರ ಮಧುರ ಪ್ರೇಮ’ ಚಿತ್ರದ ಮೂಲಕ ಸ್ವತಂತ್ರ ನಿರ್ಮಾಪಕ, ನಿರ್ದೇಶಕನಾಗಿದ್ದು ಅವಿಸ್ಮರಣೀಯ ಗಳಿಗೆಗಳು. ನಂತರ ಮುಸ್ಸಂಜೆ, ಬೇಲಿ ಮತ್ತು ಹೊಲ, ಮೊಗ್ಗಿನ ಜಡೆ ಹಾಗೂ ಪ್ರವಾಹ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದೆ. ಇವೆಲ್ಲವು ನನ್ನನ್ನು ಪರಿಪೂರ್ಣವಾಗಿ ರೂಪಿಸಿದ ಚಿತ್ರಗಳಾದವು ಎಂದು ಅವರು ತಮ್ಮ ಚಿತ್ರಗಳ ಕುರಿತು ಸ್ಮರಿಸಿದರು.

ನಿವೃತ್ತ ನ್ಯಾ.ನಾಗಮೋಹನ ದಾಸ್ ಮಾತನಾಡಿ, ಜನತೆಗೆ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಅರಿವು ಮೂಡಿಸುವಂತಹ ಶಕ್ತಿ ಸಿನಿಮಾ ರಂಗಕ್ಕಿದೆ. ಆದರೆ, ಇತ್ತೀಚಿಗೆ ತೆರೆಕಾಣುವ ಬಹುತೇಕ ಚಿತ್ರಗಳಲ್ಲಿ ಸಮಾಜಕ್ಕೆ ಮಾರಕವಾಗಿರುವ ಅಂಶಗಳೇ ಹೆಚ್ಚಿವೆ. ಈ ಬಗ್ಗೆ ಚಿತ್ರರಂಗದ ಗಣ್ಯರು ಗಂಭೀರವಾಗಿ ಚಿಂತಿಸಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸಿದ್ದಲಿಂಗಯ್ಯ, ಹಿರಿಯ ಕತೆಗಾರ ಕು.ವೀರಭದ್ರಪ್ಪ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು, ಹಿರಿಯ ನಿರ್ದೇಶಕರಾದ ಪಿ.ಶೇಷಾದ್ರಿ, ಲಿಂಗದೇವರು, ಕೆಸಿಎನ್ ಚಂದ್ರು ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News