ಚಿಕ್ಕಬಳ್ಳಾಪುರ : ಬಕ್ರೀದ್ ಹಬ್ಬ ಆಚರಣೆ
ಚಿಕ್ಕಬಳ್ಳಾಪುರ,ಸೆ.2: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲಾ ಮುಸ್ಲಿಂ ಭಾಂದವರು ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶನಿವಾರ ಸಂಭ್ರಮ, ಸಡಗರದಿಂದ ಆಚರಿಸಿದರು.
ಬಕ್ರೀದ್ ಹಬ್ಬದ ಪ್ರಯುಕ್ತ ನಗರದ ಭುವನೇಶ್ವರಿ ವೃತ್ತದ ಬಳಿಯಿರುವ ಜಾಮೀಯಾ ಮಸೀದಿಯಲ್ಲಿ ಬೆಳಗ್ಗೆ 8ಕ್ಕೆ ವಿಶೇಷ ಪಾರ್ಥನೆ ಸಲ್ಲಿಸಿದ ನೂರಾರು ಮಂದಿ ಮುಸ್ಲಿಂಮರು ನಂತರ ಬಿಬಿ ರಸ್ತೆಯಲ್ಲಿನ ಮಸ್ ದ್ ಕೂರ್ದ್ ಮಸೀದಿ ತೆರಳಿ ಅಲ್ಲಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಪ್ರಶಾಂತ ನಗರದಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ, ಅಲ್ಲಿ ಸಾಮೂಹಿಕ ಪಾರ್ಥನೆ ಸಲ್ಲಿಸಿದರಲ್ಲದೆ, ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.
ಬಕ್ರೀದ್ ಹಬ್ಬದ ಅಂಗವಾಗಿ ಶಾಸಕ ಡಾ.ಕೆ. ಸುಧಾಕರ್, ಕೆವಿ ಮತ್ತು ಪಂಚಗಿರಿ ದತ್ತಿ ಅಧ್ಯಕ್ಷ ಕೆ.ವಿ. ನವೀನ್‍ಕಿರಣ್, ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ. ನಾಗರಾಜ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಗಣ್ಯರು ಪ್ರಶಾಂತ ನಗರದ ಈದ್ಗಾ ಮೈದಾನಕ್ಕೆ ತೆರಳಿ ಎಲ್ಲ ಮುಸ್ಲಿಂ ಭಾಂದವರಿಗೆ ಶುಭಾಷಯ ಕೋರಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ, ನಗರಸಭೆ ಸದಸ್ಯ ಎಸ್.ಎಂ.ರಫೀಕ್, ರಫೀವುಲ್ಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‍ರೆಡ್ಡಿ, ತಹಸೀಲ್ದಾರ್ ಮತ್ತಿತರರು ಉಪಸ್ಥಿತರಿದ್ದರು.
ಮರೆಯಾಗುತ್ತಿರುವ ನೈತಿಕ ಮೌಲ್ಯಗಳನ್ನು ಮತ್ತೆ ಜೀವನದಲ್ಲಿ ಜಾಗೃತಗೊಳಿಸಿ ಬದುಕಿಗೆ ನವ ಚೈತನ್ಯ ಮತ್ತು ಸ್ಫೂರ್ತಿ ತುಂಬುವುದು ಹಬ್ಬಗಳ ಮುಖ್ಯ ಉದ್ದೇಶವಾಗಿದ್ದು, ಈ ಹಬ್ಬಗಳ ಹಿಂದೆ ಅಡಗಿರುವ ಧಾರ್ಮಿಕ ವೈಚಾರಿಕತೆಗಳನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಪ್ರವಾದಿ ಇಬ್ರಾಹಿಂ ಅವರ ದೈವಾಜ್ಞೆಯಂತೆ ತ್ಯಾಗ, ಬಲಿದಾನ ಸ್ಮರಣಾರ್ಥ ಆಚರಿಸುವ ಬಕ್ರೀದ್ ಹಬ್ಬವು ಪರಸ್ಪರ ಸೌಹಾರ್ಧತೆಯಿಂದ ಬದುಕುವ ಮನೋಭಾವವನ್ನು ಮೂಡಿಸುತ್ತದೆ ಎಂದರು.
- ಡಾ.ಕೆ. ಸುಧಾಕರ್ ಶಾಸಕರು, ಚಿಕ್ಕಬಳ್ಳಾಪುರ.
ತ್ಯಾಗ ಮತ್ತು ಸಹಬಾಳ್ವೆಯ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಹಿಂದೂ ಮತ್ತು ಮುಸ್ಲೀಂ ಭಾಂದವರು ಸೇರಿ ಸಹೋದರತ್ವ ಮನೋಭಾವದಿಂದ ಮಾಡುವುದು ಶ್ಲಾಘನೀಯ ಎಂದ ಅವರು, ಜಿಲ್ಲೆಯು ರಂಜಾನ್, ಗೌರಿ ಗಣೇಶ, ಬಕ್ರೀದ್ ಹಬ್ಬಗಳನ್ನು ಧರ್ಮ, ಜಾತಿಯೆಂಬ ಬೇದವಿಲ್ಲದೆ ಆಚರಿಸುವುದು ರಾಜ್ಯಕ್ಕೆ ಮಾದರಿಯಾಗಿದೆ. ಜಾತಿ ಮತ್ತು ಧರ್ಮದ ಹೆಸರಲ್ಲಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಹಬ್ಬಗಳ ಜೊತೆಗೆ ಜಾತಿ, ಧರ್ಮಗಳ ಮೂಲ ಉದ್ದೇಶವನ್ನು ಅರಿತು ಹಬ್ಬ ಆಚರಿಸಿದರೆ ಶಾಂತಿ ಲಭಿಸುತ್ತದೆ.
- ಕೆ.ವಿ. ನವೀನ್‍ಕಿರಣ್, ಕೆ.ವಿ. ಮತ್ತು ಪಂಚಗಿರಿ ದತ್ತಿಗಳ ಅಧ್ಯಕ್ಷರು, ಚಿಕ್ಕಬಳ್ಳಾಪುರ.