×
Ad

ಕಲಬುರಗಿಯಲ್ಲಿ ನಡೆಯುವ ಲಿಂಗಾಯಿತ ಮಹಾ ರ್ಯಾಲಿಗೆ ಪೂರ್ವಭಾವಿ ಸಿದ್ಧತೆ

Update: 2017-09-03 17:38 IST

ಕಡೂರು, ಸೆ. 3: ಲಿಂಗಾಯಿತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಹಾಗೂ ಸರ್ಕಾರದ ಸವಲತ್ತು ಪಡೆಯುವುದಕ್ಕಾಗಿ ಕಲಬುರಗಿಯಲ್ಲಿ ನಡೆಯುವ ಲಿಂಗಾಯಿತ ಮಹಾ ರ್ಯಾಲಿಗೆ ಪೂರ್ವಭಾವಿಯಾಗಿ ಪಟ್ಟಣದಲ್ಲಿ ರಾಷ್ಟ್ರೀಯ ಬಸವದಳ ಒಕ್ಕೂಟ ಬೈಕ್ ಜಾಥ ನಡೆಸಿತು.

ಲಿಂಗಾಯಿತ ಧರ್ಮ ಮಹಾಸಭಾ ಮತ್ತು ರಾಷ್ಟ್ರೀಯ ಬಸವದಳ ಒಕ್ಕೂಟದ ಮುಖಂಡರಾದ ಎ.ಸಿ. ಲೋಕೇಶಪ್ಪ ಲಿಂಗಾಯಿತ್ ಮತ್ತು ಬಾಣೂರು ಚೆನ್ನಬಸಪ್ಪ ನೇತೃತ್ವದಲ್ಲಿ ಜನಜಾಗೃತಿ ಜಾಥ ನಡೆಸಲಾಯಿತು.

ತಾಲೂಕಿನ ಎಸ್. ಕೊಪ್ಪಲು, ದೇವನೂರು, ಕಬ್ಬಳಿ, ಆರ್.ಜಿ. ಕೊಪ್ಪಲು, ಬಳ್ಳೇಕೆರೆ, ಗೆದ್ಲೇಹಳ್ಳಿ ಮಾರ್ಗವಾಗಿ ಕಡೂರು ಪಟ್ಟಣಕ್ಕೆ ಬಂದ ಜಾಥ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ 206ರ ಮೂಲಕ ಹಿರೇನಲ್ಲೂರು, ಗಿರಿಯಾಪುರ, ಬಾಸೂರು, ಬಿಸಲೆರೆ ಮಾರ್ಗವಾಗಿ ಸಾಗಿ ಆಡಿಗೆರೆ ಗ್ರಾಮದಲ್ಲಿ ಮುಕ್ತಾಯವಾಯಿತು.

ಈ ವೇಳೆ ಮಾಧ್ಯಮಗಳೊಂದಿಗೆ ರಾಷ್ಟ್ರೀಯ ಬಸವ ದಳ ಒಕ್ಕೂಟದ ಮುಖಂಡ ಎ.ಸಿ. ಲೋಕೇಶಪ್ಪ ಲಿಂಗಾಯಿತ್ ಮಾತನಾಡಿ, ಈ ನಮ್ಮ ಹೋರಾಟ ಸ್ವತಂತ್ರ ಧರ್ಮಕ್ಕಾಗಿ. ವೀರಶೈವ ಧರ್ಮವು ವೈದಿಕ ಧರ್ಮದ ಅವಿಭಾಜ್ಯ ಅಂಗವಾಗಿದೆ. ಲಿಂಗಾಯಿತವು  ಅಹಿಂದ ಹಾಗೂ ಸ್ವತಂತ್ರ ಧರ್ಮವಾಗಿದೆ. ಲಿಂಗಾಯಿತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಸೆ.10 ರಂದು ಕಲಬುರಗಿಯಲ್ಲಿ ಲಿಂಗಾಯಿತ ಮಹಾ ರ್ಯಾಲಿ ನಡೆಸುವುದಾಗಿ ಹೇಳಿದರು.

ಲಿಂಗಾಯಿತ ಸ್ವತಂತ್ರ ಧರ್ಮಕ್ಕೆ ಜಿಲ್ಲೆಯ ಮಠಾಧೀಶರು ಬೆಂಬಲಿಸದಿರುವುದು ಬೇಸರದ ಸಂಗತಿಯಾಗಿದೆ, ಉತ್ತರ ಕರ್ನಾಟಕದ ಎಲ್ಲ ಮಠಾಧೀಶರುಗಳು ಲಿಂಗಾಯಿತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಈ ನಮ್ಮ ಹೋರಾಟಕ್ಕೆ ಸಿದ್ದಗಂಗಾ ಶ್ರೀಗಳು ಮತ್ತು ಸುತ್ತೂರು ಶ್ರೀಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಕಡೂರು ತಾಲೂಕಿನಲ್ಲಿ ಹತ್ತು ರಾಷ್ಟ್ರೀಯ ಬಸವದಳ ಹಾಗೂ ಎರಡು ಬಸವ ಮಂಟಪ ಕಾರ್ಯ ನಿರ್ವಹಿಸುತ್ತಿದೆ. ತಾಲೂಕಿನಾದ್ಯಂತ ಬಸವದಳ ಸಂಘಟನೆ ಉತ್ತಮವಾಗಿದೆ ಎಂದು ನುಡಿದರು.

ಈ ಸಂದರ್ಭ ಜಯಚನ್ನೇಗೌಡ, ಎಸ್. ಕೊಪ್ಪಲು ರಘು, ಉಮೇಶ್, ಮಂಜುಳ, ಶಿವಮೂರ್ತಿ, ರತ್ನಮ್ಮ, ಜಮುನಾಚಂದ್ರಪ್ಪ, ಸುಧಾ, ಓಂಕಾರಪ್ಪ, ಎಲ್. ಪಾಟೇಲ್ ಭಾಗವಹಿಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News