ಜನಪದರು ಪರಿಶುದ್ಧವಾದ ಜೀವನಾನುಭವ ಪಡೆದವರು: ಚಟ್ನಹಳ್ಳಿ ಮಹೇಶ್
ಬೀರೂರು, ಸೆ.3: ಗ್ರಾಮೀಣ ಕೃಷಿ ಪರಂಪರೆಯ ಬದುಕನ್ನು ಕಟ್ಟಿಕೊಟ್ಟ ಜನಪದರು ಲೋಕದ ಪರಂಪರೆ ಮತ್ತು ಸಂಸ್ಕೃತಿಯನ್ನು ಪರಿಚಯಿಸಿದವರು ಜನಪದರು, ವಿಶ್ವ ಪರಂಪರೆಯಲ್ಲಿ ಯಾವುದೇ ಭಾಗದಲ್ಲಿಯಾದರೂ ಸಹ ತಮ್ಮದೇ ಆದ ಸಂಸ್ಕೃತಿಯನ್ನು ಅನಾವರಣಗೊಳಿಸುವ ಮೂಲಕ ಅದು ತನ್ನ ಜಾನಪದ ಸಂಸ್ಕೃತಿಯ ಪರಂಪರೆಯನ್ನು ಪರಿಚಯಿಸುತ್ತದೆ ಎಂದು ಸಾಹಿತಿ ಚಟ್ನಹಳ್ಳಿ ಮಹೇಶ್ ತಿಳಿಸಿದರು.
ಅವರು ಕಾಮನಕೆರೆ ಮುರಾರ್ಜಿ ವಸತಿ ಶಾಲೆ ಮತ್ತು ಜಿಲ್ಲಾ ಕನ್ನಡ ಜಾನಪದ ಪರಿಷತ್ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಜನಪದರು ಆತ್ಮ ಸಂತೋಷಕ್ಕಾಗಿ ಅಥವಾ ಬದುಕಿನ ಸಹಜ ಲಯವಾಗಿ ನಾಲ್ಕಾರು ಗೀತೆಗಳನ್ನಾದರೂ ಕಲಿತು ಅಗಾಗ ಅದನ್ನು ಗುನುಗಿಕೊಳ್ಳುವ ಹಾಗೂ ಹಾಡುವುದನ್ನು ನಮ್ಮ ಹಳ್ಳಿಗಳಲ್ಲಿ ಕಾಣಬಹುದು. ಶಿಷ್ಟ ಕವಿಗಳು ಕಷ್ಟಪಟ್ಟು ಪ್ರಯತ್ನಪೂರ್ವಕವಾಗಿ ರಚಿಸಿದ ಗೀತೆಗಳಿಗಿಂತ ಇಂಥಹ ಜನಪದಗೀತೆಗಳೇ ಹೆಚ್ಚು ಜನಪ್ರಿಯವಾಗಿದೆ ಎಂದು ನುಡಿದರು.
ಪರಿಶುಧ್ಧವಾದ ರಸದ ಗಳಿಗೆಗಳನ್ನು ಕಟ್ಟಿಕೊಟ್ಟವರು ಜನಪದರು “ಬದುಕಿಗಾಗಿ ಬರೆದವರಲ್ಲ ಬದುಕನ್ನೇ ಬರೆದವರು ಆಚಾರ ಅಡಿಪಾಯ ಮಾಡಿ ಜನಪದರು ಬದುಕನ್ನು ಕಟ್ಟದವರು ಜನರಿಂದ ಜನರಿಗೆ ಬಂದಂತಹ ಮೌಖಿಕವಾದ ಸಾಹಿತ್ಯ ಕಲ್ಪಿಸಿದವರು ಜೀವನ ಶ್ರಧ್ದೆಯನ್ನು ಜನಪದರು ಕೃಷಿ ಪರಂಪರೆಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಜಾನಪದ ಕಲೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕಾಣಬಹುದು ಆದರೆ ಈ ಪ್ರತಿಭೆಗಳನ್ನು ಗುರುತಿಸಿ ಅವರ ಕಲೆಯನ್ನು ಯುವ ಜನತೆಗೆ ಜಾನಪದದ ಸೊಗಡನ್ನು ಪರಿಚಯಿಸಬೇಕಾಗಿದೆ. ಜನಪದರ ಆಶಯಗಳು ಜೀವನ ಕ್ರಮವಾಗಬೇಕು ಜ್ಯೋತಿ ತಾನು ಉರಿದು ಬೇರೆಯವರಿಗೆ ಬೆಳಕನ್ನು ನೀಡಬೇಕು ಹಾಗೂ ದೀಪಗಳಾಗಿ ಬೆಳಗಬೇಕು. ಅದೇ ರೀತಿ ಜನಪದರು ದೀಪಗಳಾಗಿ ಬೆಳಗಿದವರು. ಜನಪದರ ವಿಶೇಷವಾದ ಮೌಲ್ಯ ತಾನು ಬದುಕಿ ಇತರರು ಬದುಕಬೇಕು ಎನ್ನುವ ತತ್ವವನ್ನು ಹೊಂದಿವರು ಎಂದು ತಿಳಿಸಿದರು.
ಈ ವೇಳೆ ಕಾಮನಕೆರೆ ಮುರಾರ್ಜಿ ವಸತಿ ಶಾಲೆ ಪ್ರಭಾರೆ ಮುಖ್ಯ ಶಿಕ್ಷಕ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಶಶಿಕಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾನಪದ ಕಲಾವಿದರಾದ ಹುಲಿಕೆರೆ ಪುಲಿಕೇಶಿ ಮತ್ತು ಪುಷ್ಪ ಜಾನಪದ ಗೀತೆಗಳನ್ನು ಹಾಡುವ ಮೂಲಕ ಮಕ್ಕಳಿಗೆ ತರಬೇತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಹಿರೇನಲ್ಲೂರು ಹೋಬಳಿ ಕನ್ನಡ ಜಾನಪದ ಪರಿಷತ್ ಘಟಕ ಅಧ್ಯಕ್ಷ ಸಿ.ಎಸ್.ರೇವಣಸಿದ್ದಪ್ಪ ಮತ್ತು ಸಂಗಡಿಗರು ಜಾನಪದ ಗೀತೆಗಳನ್ನು ಹಾಡಿದರು. ಕಾಮನಕೆರೆ ಮುರಾರ್ಜಿ ವಸತಿ ಶಾಲೆ ಶಿಕ್ಷಕರಾದ ಶ್ರೀನಿವಾಸ್, ಚಂದ್ರಪ್ಪ ಸಂಗೀತ ಶಿಕ್ಷಕಿ ಉಷಾ ಹಾಗೂ ಗಿರಿಯಾಪುರದ ವೀರಗಾಸೆ ಕಲಾವಿದ ಪುಟ್ಟಸ್ವಾಮಿ, ಕಡೂರು ತಾಲೂಕು ಕನ್ನಡ ಜಾನಪದ ಪರಿಷತ್ ಘಟಕ ಗೌರವಾಧ್ಯಕ್ಷ ಟ್ರೆಜರಿ ರಾಮಪ್ಪ ಉಪಸ್ಥಿತರಿದ್ದರು.