×
Ad

‘ಲಿಂಗೈಕ್ಯ’ ಎಂಬುದನ್ನು ಒಪ್ಪುವವರು ‘ಲಿಂಗೋದ್ಭವ’ ಪ್ರಶ್ನಿಸುವುದು ದ್ವಂದ್ವ: ಬಿ.ಪಿ.ಶಿವಮೂರ್ತಿ

Update: 2017-09-03 18:03 IST

ಚಿಕ್ಕಮಗಳೂರು, ಸೆ.3: ವೀರಶೈವ-ಲಿಂಗಾಯತರೆಲ್ಲಾರೂ ಪಂಚಾಚಾರ್ಯರ ಒಂದಲ್ಲೊಂದು ಗೋತ್ರ-ಸೂತ್ರಕ್ಕೆ ಸೇರಿದವರೇ ಆಗಿರುತ್ತಾರೆ.  ‘ಲಿಂಗೈಕ್ಯ’ ಎಂಬುದನ್ನು ಒಪ್ಪುವವರು ‘ಲಿಂಗೋದ್ಭವ’ ಪ್ರಶ್ನಿಸುವುದು ದ್ವಂದ್ವ ಎಂದು ಆಧ್ಯಾತ್ಮ ಚಿಂತಕ ಬಿ.ಪಿ.ಶಿವಮೂರ್ತಿ ನುಡಿದರು.

ಜಂಗಮಬಳಗ ನಗರದ ಸುವರ್ಣ ಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವ ಶಾಸ್ತ್ರಿ ಸಭಾಂಗಣದಲ್ಲಿ ಕೆ.ಎಂ.ಬಸವರಾಧ್ಯ ಸ್ಮರಣಾರ್ಥ ಆಯೋಜಿಸಿದ್ದ ಜಂಗಮ ಚಿಂತನಗೋಷ್ಠಿಯಲ್ಲಿ ಅವರು ಮಾತನಾಡಿದರು.

ನೈತಿಕತೆ ಮತ್ತು ವೈಚಾರಿಕತೆ ನಾಣ್ಯದ ಎರಡುಮುಖ. ಕಲುಷಿತಗೊಂಡ ಮನಸ್ಸನ್ನು ಶುದ್ಧೀಕರಿಸಲು ಧರ್ಮಾಚರಣೆ ಅಗತ್ಯ. ದೇಹದ ಶುದ್ಧಿಗೆ ಸ್ನಾನದಂತೆ  ಮನಸ್ಸಿನ ಶುದ್ಧಿಗೆ ಭಗವಂತನ ನಾಮಸ್ಮರಣೆ ಅಗತ್ಯ. ಸಕಲ ಜೀವಾತ್ಮರಿಗೂ ಒಳಿತನ್ನೆ ಬಯಸಿದ ವೀರಶೈವ ಧರ್ಮವನ್ನು ಯುಗ ಯುಗಗಳಲ್ಲಿ ಅವತರಿಸಿದ ಪಂಚಾಚಾರ್ಯರು ಶಿವಸಿದ್ಧಾಂತದ ಮೂಲಕ ಸಾರಿದ್ದಾರೆ. ಲಿಂಗೋದ್ಭವರಾದ ಪಂಚ ಆಚಾರ್ಯರಿಗೆ ಪ್ರತ್ಯೇಕ ಗೋತ್ರ-ಸೂತ್ರಗಳಿದ್ದು ಪ್ರತಿಯೊಬ್ಬ ವೀರಶೈವರೂ ಇದರ ವ್ಯಾಪ್ತಿಗೆ ಬರುತ್ತಾರೆ. ಒಂದು ಧರ್ಮಕ್ಕೆ ನೈತಿಕ, ಸಾಂಪ್ರದಾಯಕ ಮತ್ತು ದಾರ್ಶನಿಕ ವಿಚಾರಗಳು ಅಗತ್ಯ ಎಂದು ಹೇಳಿದರು.

ವೀರಶೈವ ಲಿಂಗಾಯತ ಭಿನ್ನವಲ್ಲ.  ಒಂದು ಗ್ರಾಂಥಿಕ ಶಬ್ದವಾದರೆ ಮತ್ತೊಂದು ರೂಢಿನಾಮ.  ಅಲ್ಪಸಂಖ್ಯಾರ ಸೌಲಭ್ಯ ಪಡೆಯಲು ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಸರಿಯಲ್ಲ.  ಧಾರ್ಮಿಕ ಸಿದ್ಧಾಂತ ಒಂದೇ ಆಗಿದ್ದು,  ಆಚಾರ ಸಿದ್ಧಾಂತದಲ್ಲಿ ಮಾತ್ರ ಸ್ವಲ್ಪ ಭಿನ್ನತೆ ಕಾಣುತ್ತೇವೆ. ಬಸವಣ್ಣ ವೇದವಿರೋಧಿಗಳಲ್ಲ, ಅದರಲ್ಲಿರುವ ಹಿಂಸಾಮಯತೆಯನ್ನಷ್ಟೇ ವಿರೋಧಿಸಿದರು. ಶಿವಾಗಮಗಳಲ್ಲಿ ಉತ್ತರಭಾಗವನ್ನು ಬಸವಣ್ಣನವರು ಗೌರವದಿಂದ ಸ್ವೀಕರಿಸಿದ್ದಾರೆ ಎಂದು ತಿಳಿಸಿದರು.

“ಸಾರಿನೊಳಗಿದ್ದರೂ ಸೌಟಿಗೆ ಸಾರಿನ ರುಚಿ ಗೊತ್ತಿಲ್ಲ’ ಎನ್ನುವಂತೆ ಹಲವರಿಗೆ ಸತ್ಯಸಂಗತಿ ಅರಿವಾಗ ಬೇಕೆಂದರು. ವಚನಸಾಹಿತ್ಯ ಧರ್ಮ ಗ್ರಂಥವಾಗುವುದು ಕಷ್ಟ. ಏಕೆಂದರೆ ವಚನ ಸಾಹಿತ್ಯದಲ್ಲಿ ಹಲವರ ಅಭಿಪ್ರಾಯ-ಭಿನ್ನತೆ ಕಾಣುತ್ತಿರುವಾಗ ಇದು ಹೇಗೆ ಧರ್ಮ ಗ್ರಂಥವೆನಿಸಿಕೊಳ್ಳುತ್ತದೆ ಎಂದು ಪ್ರಶ್ನಿಸಿದರು.

ಅರ್ಚಕ ಇಂದಾವರದ ವೇ.ಮೂ.ಪುಪ್ಪಯ್ಯ ಶಿವಾಷ್ಟೋತ್ತರ ಶತನಾಮವಳಿಯನ್ನು ಪಠಿಸಿ ಮಾತನಾಡಿ ,‘ಓಂಕಾರ’ ಇರುವಲ್ಲಿ ‘ಅಹಂಕಾರ’ ಇರುವುದಿಲ್ಲ. ದೇವಸ್ತುತಿಯಿಂದ ಮನಸ್ಸಿನಲ್ಲಿ ಶಾಂತಿ-ನೆಮ್ಮದಿ ಮೂಡುತ್ತದೆ ಎಂದರು. 

ಶಿಕ್ಷಕ ಆಲೂರು ಪರಮೇಶ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸತ್ಸಂಗದಲ್ಲಿ ಅಪಾರ ಶಕ್ತಿ ಇದೆ.  ಸದ್ವಿಚಾರಗಳ ಮಂಥನದಿಂದ ಒಳ್ಳೆಯ ನಡೆ-ನುಡಿ-ಆಚರಣೆಗಳಿಗೆ ಪ್ರೇರಣೆಯಾಗುತ್ತದೆ ಎಂದು ವಿವರಿಸಿದರು.

ನಿವೃತ್ತ ಡಿಪ್ಯೂಟಿ ತಹಶೀಲ್ದಾರ್ ಚಂದ್ರಶೇಖರ್ ಪ್ರಾಸ್ತಾವಿಸಿದ್ದು, ಬಳಗದ ಸಂಚಾಲಕ ಪ್ರಭುಲಿಂಗಶಾಸ್ತ್ರಿ ಸ್ವಾಗತಿಸಿ, ರಂಗಕರ್ಮಿ ಆರ್.ಚಂದ್ರಶೇಖರ್ ನಿರೂಪಿಸಿ, ಶಿಕ್ಷಕಿ ಅಂಬಿಕಾ ಸದಾಶಿವ ವಂದಿಸಿದರು. ಸುಧಾಪರಮೇಶ್ ಪ್ರಾರ್ಥಿಸಿದ್ದು, ರೇಖಾಪ್ರಸನ್ನ ತಂಡ ರೇಣುಕಗೀತೆ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News