ಅಹಿತಕರ ಘಟನೆ ಹಿನ್ನೆಲೆ: ಶಿವಮೊಗ್ಗ ನಗರದಲ್ಲಿ ಬಿಗಿ ಪೊಲೀಸ್ ಪಹರೆ
ಶಿವಮೊಗ್ಗ, ಸೆ.3: ನಗರದ ಗೋಪಾಳದ ಶ್ರೀರಾಮನಗರ ಬಡಾವಣೆ ಮತ್ತು ಸೀಗೆಹಟ್ಟಿ ಬಡಾವಣೆಯಲ್ಲಿ ಶನಿವಾರ ರಾತ್ರಿ ಗಣೇಶಮೂರ್ತಿ ವಿಸರ್ಜನೆ ವೇಳೆ ನಡೆದ ಅಹಿತಕರ ಘಟನೆ ಹಿನ್ನೆಲೆ ಹಾಗೂ ಸೆ. 5ರಂದು ನಡೆಯುವ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ರವಿವಾರದಿಂದ ನಗರದ ಆಯ ಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿದೆ.
ಘಟನೆಗಳ ವಿವರ: ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಳದ ಶ್ರೀರಾಮನಗರ ಬಡಾವಣೆಯಲ್ಲಿ ಗಣಪತಿಯೊಂದರ ಮೆರವಣಿಗೆಯ ವೇಳೆ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿದೆ. ಗಾಯಗೊಂಡ ಯುವಕ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯ ಬಳಿಕ ಬಡಾವಣೆಯಲ್ಲಿ ಕೆಲ ಸಮಯ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಅಲ್ಲದೆ, ಪ್ರದೇಶದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.
ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಒ.ಟಿ.ರಸ್ತೆಯ ಸೀಗೆಹಟ್ಟಿ ಬಳಿ ಶ್ರೀ ರಾಮ ಸೇವಾ ಸಮಿತಿಯ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯ ವೇಳೆ ಎರಡು ಗುಂಪುಗಳ ನಡುವೆ ಗದ್ದಲವಾಗಿದೆ. ಈ ವೇಳೆ ತೂರಿ ಬಂದ ಕಲ್ಲೊಂದು ಬಿದ್ದು ಬಾಲಕಿಯೋರ್ವಳು ಗಾಯಗೊಂಡ ಘಟನೆ ಕೂಡ ನಡೆದಿದೆ. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರವಿವಾರ ಬೆಳಗ್ಗೆ ಕೂಡ ಒ.ಟಿ. ರಸ್ತೆಯಲ್ಲಿ ಎರಡು ಗಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಎರಡು ಗುಂಪುಗಳನ್ನು ಚದುರಿಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಿದ್ದು, ಘರ್ಷಣೆಗೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಕಟ್ಟೆಚ್ಚರ: ಸೆ. 5 ರಂದು ಶಿವಮೊಗ್ಗ ನಗರದಲ್ಲಿ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆ ನಡೆಯಲಿದೆ. ಈ ನಡುವೆ ನಗರದ ಎರಡು ಕಡೆ ನಡೆದಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ರವಿವಾರದಿಂದ ನಗರಾದ್ಯಂತ ವ್ಯಾಪಕ ಕಟ್ಟೆಚ್ಚರ ವಹಿಸಿದೆ.
ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಈ ನಡುವೆ ರವಿವಾರ ಸಂಜೆ ಪೊಲೀಸರು ನಗರದಲ್ಲಿ ಪಥ ಸಂಚಲನ ನಡೆಸಿ ನಾಗರಿಕರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ನಡೆಸಿದರು. ಜೊತೆಗೆ ಶಾಂತಿ ಕದಡುವ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡುವ ಕೆಲಸ ನಡೆಸಿದ್ದಾರೆ.