ಭಾಗಮಂಡಲ: ‘ನೀರಿಗಾಗಿ ಅರಣ್ಯ – ಗಿಡನೆಟ್ಟು ಬೆಳೆಸೋಣ’ ಪರಿಸರ ಜಾಗೃತಿ
ಮಡಿಕೇರಿ ಸೆ.3 : ಕರ್ನಾಟಕ ಅರಣ್ಯ ಇಲಾಖೆ, ಕೊಡಗು ಅರಣ್ಯ ವೃತ್ತ, ಮಡಿಕೇರಿ ವನ್ಯಜೀವಿ ವಿಭಾಗ, ಭಾಗಮಂಡಲ ವನ್ಯಜೀವಿ ವಲಯ ವತಿಯಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ‘ಹಸಿರೆಡೆಗೆ ನಡೆ ಹಾಗೂ ‘ಹಸಿರು ಕರ್ನಾಟಕ ಅಭಿಯಾನ’ ಕಾರ್ಯಕ್ರಮದಡಿ ಭಾಗಮಂಡಲದ ಕಾವೇರಿ ನದಿಪಾತ್ರದಲ್ಲಿ ‘ನೀರಿಗಾಗಿ ಅರಣ್ಯ – ಗಿಡನೆಟ್ಟು ಬೆಳೆಸೋಣ’ ಎಂಬ ಧ್ಯೇಯದೊಂದಿಗೆ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆ ಕುರಿತಂತೆ ಏರ್ಪಡಿಸಿದ್ದ ಪರಿಸರ ಜಾಗೃತಿ ಆಂದೋಲನಕ್ಕೆ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಗಿಡನೆಡುವ ಮೂಲಕ ಚಾಲನೆ ನೀಡಲಾಯಿತು.
ವಿದ್ಯಾರ್ಥಿಗಳಿಂದ ಪರಿಸರ ಜಾಥಾ: ಜೀವನದಿ ಕಾವೇರಿಯ ಸಂರಕ್ಷಣೆ, ಕಾಡಿನ ರಕ್ಷಣೆ, ಜಲ ಸಂರಕ್ಷಣೆ ಸೇರಿದಂತೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಭಿತ್ತಿ ಫಲಕಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದ ವಿದ್ಯಾರ್ಥಿಗಳು ಪರಿಸರ ಘೋಷಣೆಗಳನ್ನು ಕೂಗಿ ಜನರ ಗಮನ ಸೆಳೆದರು.
ಪರಿಸರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ವಲಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ಲಿಂಗರಾಜು ಮಾತನಾಡಿ, ಜೀವ ವೈವಿಧ್ಯತೆಯಿಂದ ಕೂಡಿದ ಜಿಲ್ಲೆಯ ಶ್ರೀಮಂತಿಕೆಯನ್ನು ನಮ್ಮ ಇಂದಿನ ಮತ್ತು ಮುಂದಿನ ಪೀಳೆಗೆಯ ಹಿತದೃಷ್ಟಿಯಿಂದ ಸಂರಕ್ಷಿಸಬೇಕಾಗಿದೆ. ಅರಣ್ಯ ಇಲಾಖೆಯಿಂದ ಮಾತ್ರ ಸ್ವಾಭಾವಿಕ ಪರಿಸರವನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ. ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಪಂಚಾಯತ್ ಸದಸ್ಯೆ ಕವಿತಾಪ್ರಭಾಕರ್ ಮಾತನಾಡಿ, ಅಭಿವೃದ್ಧಿಯ ನೆಪದಲ್ಲಿ ಮನುಷ್ಯ ಇಂದು ಎಲ್ಲಾ ಜೀವಿಗಳ ಅಸ್ತಿತ್ವಕ್ಕೆ ಧಕ್ಕೆಯನ್ನುಂಟುಮಾಡುತ್ತಿದ್ದಾನೆ. ಅರಣ್ಯನಾಶದಿಂದ ಗಾಳಿ, ನೀರು ಮತ್ತಿತರ ಪ್ರಾಕೃತಿಕ ಸಂಪನ್ಮೂಲಗಳು ಮಲಿನವಾಗುತ್ತಿದ್ದು ಅವುಗಳನ್ನು ಸಂರಕ್ಷಿಸುವ ಅರಿವನ್ನು ಜನಸಾಮಾನ್ಯರಲ್ಲಿ ಮೂಡಿಸುವ ಅಗತ್ಯವಿದೆ ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮ್‍ಕುಮಾರ್ ಮಾತನಾಡಿ, ಪರಿಸರದ ಸಮತೋಲನ ಸುಸ್ಥಿತಿಗಾಗಿ, ಜೀವವೈವಿಧ್ಯತೆಯ ರಕ್ಷಣೆಗಾಗಿ ಸಂಪನ್ಮೂಲಗಳ ಸುಸ್ಥರ ಬಳಕೆಗಾಗಿ ಹಾಗೂ ಜೀವಸಂಕುಲದ ಉಳಿವಿಗಾಗಿ ಅರಣ್ಯಗಳನ್ನು ಸಂರಕ್ಷಿಸಬೇಕಾಗಿದೆ. ಪಶ್ಚಿಮಘಟ್ಟದ ಪ್ರದೇಶದಲ್ಲಿ ಹುಟ್ಟಿಹರಿಯುವ ಕಾವೇರಿ ನದಿ ಸೇರಿದಂತೆ ಎಲ್ಲಾ ನದಿಗಳ ಸಂರಕ್ಷಣೆಗೆ ಕಂಕಣ ಬದ್ಧರಾಗಿ ಜೀವಜಲದ ಉಳಿವಿಗೆ ಪಣತೊಡಬೇಕಾಗಿದೆ ೆಮದು ಕರೆ ನೀಡಿದರು.
ಕಾವೇರಿ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಜೋಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಹಾಗೂ ರಾಜ್ಯ ‘ಪರಿಸರ ಮಿತ್ರ’ ಪ್ರಶಸ್ತಿ ಪುರಸ್ಕೃತರಾದ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಫಿಲಿಪ್‍ವಾಸ್,ಕೊಡಗು ಅರಣ್ಯ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ಲಿಂಗರಾಜು, ಮಡಿಕೇರಿ ವನ್ಯಜೀವಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಎಂ.ಎಂ.ಜಯ, ಮಡಿಕೇರಿ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎ.ಸೀಮ, ಭಾಗಮಂಡಲ ವನ್ಯಜೀವಿ ವಲಯದ ವಲಯಾಧಿಕಾರಿ ಕೆ.ಎಂ. ಮರಿಸ್ವಾಮಿ ಹಾಗೂ ಚಂಗಪ್ಪ, ಕಾವೇರಿ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲ ದಿವಾಕರ್, ಕಾವೇರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪಾಂಡಿ ತಿಮ್ಮಯ್ಯ, ನಿರ್ದೇಶಕ ನಂಜುಡಪ್ಪ, ಭಾಗಮಂಡಲ ಗ್ರಾಮಪಂಚಾಯತ್ ಸದಸ್ಯ ಭಾಸ್ಕರ, ಕರ್ನಾಟಕ ವಿಜ್ಞಾನ ಪರಿಷತ್ತಿನ ಸದಸ್ಯರಾದ ಶ್ರೀನಾಥ್, ಸಿ.ಎಸ್.ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.
ಮಡಿಕೇರಿ ವನ್ಯಜೀವಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಎಂ.ಎಂ.ಜಯ ಸ್ವಾಗತಿಸಿದರು. ಕಾವೇರಿ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲ ದಿವಾಕರ್ ವಂದಿಸಿದರು.