×
Ad

ಕ್ರೀಡೆಯಿಂದ ದೈಹಿಕ ಬಲ, ಮಾನಸಿಕ ಶಕ್ತಿ ವೃದ್ಧಿಸುತ್ತದೆ: ಎಚ್.ಎಲ್.ಪೂರ್ಣಚಂದ್ರ

Update: 2017-09-03 20:07 IST

ಗುಂಡ್ಲುಪೇಟೆ, ಸೆ.3: ದೈಹಿಕ ಧೃಡತೆ ಹಾಗೂ ಮನೋಬಲ ಹೆಚ್ಚಿಸಲು ನೆರವಾಗುವ ಕ್ರೀಡೆಯನ್ನು ಇಂದಿನ ಯಾಂತ್ರಿಕ ಯುಗದಲ್ಲಿ ಕಡೆಗಣಿಸಿ ವಿದ್ಯಾರ್ಥಿಗಳನ್ನು ಬರಿ ಅಂಕಗಳಿಸುವ ಯಂತ್ರಗಳನ್ನಾಗಿಸುವ ಪ್ರವೃತ್ತಿ ಪೋಷಕರಲ್ಲಿ ಹೆಚ್ಚಾಗಿ ಬೆಳೆಯುತ್ತಿದೆ ಎಂದು ಉಪನ್ಯಾಸಕ ಎಚ್ .ಎಲ್ ಪೂರ್ಣಚಂದ್ರ ಆತಂಕ ವ್ಯಕ್ತಪಡಿಸಿದರು. 

ತಾಲೂಕಿನ ಬೇಗೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಕ್ರೀಡಾ ದಿನಾಚರಣೆಯಲ್ಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ನಗರ ಪ್ರದೇಶಗಳಲ್ಲಿ ಕ್ರೀಡೆ ಎಂದರೆ ಯೋಗ ಅಥವಾ ಒಳಾಂಗಣ ಆಟ ಎಂದೇ ಬಿಂಬಿಸಲಾಗುತ್ತಿದ್ದು, ಹೊರ ಕ್ರೀಡಾಂಗಣದ ಆಟಕ್ಕೆ ಹೆಚ್ಚು ಒತ್ತು ನೀಡುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳ ದೈಹಿಕ ಸಧೃಡತೆ ಕಡಿಮೆಯಾಗುತ್ತಿರುವುದರ ಜೊತೆಗೆ ಅನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ ಎಂದು ಹೇಲಿದರು.

ಕ್ರೀಡೆಯಿಂದ ದೈಹಿಕ ಬಲದ ಜೊತೆಗೆ ಮಾನಸಿಕ ಶಕ್ತಿ ಮತ್ತು ತಾಳ್ಮೆ, ಸ್ನೇಹ ಮನೋಭಾವ ಬೆಳೆಯುತ್ತದೆ. ಬೇರೆಲ್ಲಾ ಕ್ಷೇತ್ರಗಳಲ್ಲಿ ತಮಗಿಂತ ಸಾಧನೆಮಾಡಿದವರ ಬಗ್ಗೆ ಅಸಮಧಾನವಿದ್ದರೆ ಕ್ರೀಡಾಕ್ಷೇತ್ರದಲ್ಲಿ ಮಾತ್ರ ಸಾಧಿಸಿದವರನ್ನು ಕಂಡು ಹೆಮ್ಮೆಪಟ್ಟು ಗೌರವಿಸುವ ಕೌಶಲ್ಯವಿದೆ. ಹಾಕಿ ಮಾಂತ್ರಿಕ ಧ್ಯಾನ್‍ಚಂದ್‍ರವರ ನೆನಪಿಗಾಗಿ ಆಗಸ್ಟ್29 ನ್ನು ವಿಶ್ವ ಕ್ರೀಡಾ ದಿನವಾಗಿ ಆಚರಣೆಮಾಡಲಾಗುತ್ತಿದೆ, ಕ್ರೀಡಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು ಅವರಂತಹ ಆಟಗಾರರಿಗೆ ಭಾರತರತ್ನ ಪ್ರಶಸ್ತಿ ಲಭಿಸದಿರುವುದು ವಿಷಾದ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಯ ಜೊತೆಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಕರೂ ಸಹ ಪ್ರತಿಭೆಯಿರುವ ಮಕ್ಕಳನ್ನು ಪ್ರೋತ್ಸಾಯಿಸಿ ಬೆಳೆಸಬೇಕು ಮತ್ತು ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಅಂಕ ಗಳಿಸಿದವರ ಹೆಸರುಗಳನ್ನಷ್ಟೆ ಪ್ರದರ್ಶಿಸುವ ಬದಲು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ನಾಮಫಲಕ ಹಾಕುವಂತಾಗಬೇಕು ಇದರಿಂದ ಮುಂಬರುವ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಉತ್ತೇಜನ ನೀಡಿದಂತಾಗುತ್ತದೆ ಎಂದರು.

ಈ ವೇಳೆ ಕಾಲೇಜಿನಿಂದ ವಿವಿಧ ಸ್ಪರ್ದೆಗಳಲ್ಲಿ ಗೆದ್ದು ರಾಜ್ಯಮಟ್ಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಭಾವಚಿತ್ರಗಳುಳ್ಳ ಫೋಟೊ ಬಿಡುಗಡೆಗೊಳಿಸಿ ಅಭಿನಂದಿಸಲಾಯಿತು. ಹಾಗೂ ಕಾಲೇಜಿನ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕ ನಾಗರಾಜು ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶಿವಲಿಂಗಶೆಟ್ಟಿ, ಉಪಪ್ರಾಂಶುಪಾಲ ನಾಗೇಶ್, ಉಪನ್ಯಾಸಕರಾದ ಗೌರಿಶಂಕರ್, ಭಾಸ್ಕರ್, ರಾಜಶೇಖರ್, ಕುಮಾರ್, ಷಡಕ್ಷರಸ್ವಾಮಿ, ಸುರೇಶ್, ಅಲ್ಮಾಸ್‍ಬೇಗಂ, ಪೂರ್ಣಿಮಾ, ಅನುಸೂಯ ಸೇರಿದಂತೆ ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News