×
Ad

ಪತ್ರಕರ್ತರು ವಸ್ತುನಿಷ್ಠ ವರದಿಗೆ ಒತ್ತು ನೀಡಬೇಕು: ಕೆ.ವಿ.ಪ್ರಭಾಕರ್

Update: 2017-09-03 22:06 IST

ಮಂಡ್ಯ, ಸೆ.3: ಪತ್ರಕರ್ತರು ನೈಜ, ವಸ್ತುನಿಷ್ಠ ವರದಿಗಳಿಗೆ ಒತ್ತು ನೀಡಬೇಕು. ಮಾನವೀಯ ಹಾಗು ತನಿಖಾ ವರದಿಗಳು ಸಮಾಜವನ್ನು ಜಾಗೃತಗೊಳಿಸುತ್ತವೆ. ಪತ್ರಿಕಾರಂಗ ಅಭಿವೃದ್ಧಿಯ ಭಾಗವಾದಾಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವುದಕ್ಕೆ ಸಾರ್ಥಕತೆ ಬರಲು ಸಾಧ್ಯ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯಾಧಿಕಾರಿ ಕೆ.ವಿ.ಪ್ರಭಾಕರ್ ಹೇಳಿದ್ದಾರೆ.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆವರಣದಲ್ಲಿ ರವಿವಾರ ನಡೆದ ಪತ್ರಕರ್ತರ ಭವನದ ನವೀಕೃತ ಹವಾ ನಿಯಂತ್ರಿತ ಸಭಾಂಗಣ, ಆಡಳಿತ ಮಂಡಳಿ ಕಚೇರಿ, ಗ್ರಂಥಾಲಯ ಉದ್ಘಾಟನೆ ಹಾಗು ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೃಶ್ಯ ಮಾಧ್ಯಮಗಳಲ್ಲಿ ರಾಜಕಾರಣಿಗಳು ಹಾಗು ಜನಸಾಮಾನ್ಯರ ವೈಯಕ್ತಿಕ ವಿಚಾರಗಳು ವಿಜೃಂಭಿಸುತ್ತಿವೆ. ಇದರ ಪರಿಣಾಮವಾಗಿ ಪತ್ರಕರ್ತರ ಬಗ್ಗೆ ಸಮಾಜದ ಜನರಲ್ಲಿ ಅಪಸ್ವರ ಎದ್ದಿದೆ. ಇಂತಹುದ್ದಕ್ಕೆ ಎಂದಿಗೂ ಪತ್ರಕರ್ತರು ಅವಕಾಶ ನೀಡಬಾರದು. ಸಮಾಜದ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ವರದಿಗಾರಿಕೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಪತ್ರಿಕೋದ್ಯಮ ಹಾಳಾಗಿದೆ. ಪತ್ರಕರ್ತರು ಸರಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಪತ್ರಿಕೋದ್ಯಮ ಇಂದು ವ್ಯಾಪಾರವಾಗಿದೆ. ಹಿಂದೆಲ್ಲಾ ಪತ್ರಿಕೆಗಳಿಗೆ ಮುಖಪುಟವೇ ಪ್ರಧಾನವಾಗಿತ್ತು. ಆದರೆ, ಇಂದು ಮುಖಪುಟ ನೋಡಬೇಕೆಂದರೆ ಎರಡು ಮೂರು ಪುಟಗಳನ್ನು ತಿರುವುಹಾಕಬೇಕಾದ ಪರಿಸ್ಥಿತಿ ಇದೆ ಎಂದು ಅವರು ವಿಷಾದಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರಕರ್ತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಈಗಾಗಲೇ ಪತ್ರಕರ್ತರಿಗೆ ಆರೋಗ್ಯಭಾಗ್ಯಯೋಜನೆ ಜಾರಿಗೊಳಿಸಿದ್ದಾರೆ. ಜಿಲ್ಲಾಮಟ್ಟದ ಪತ್ರಿಕೆಗಳಿಗೆ ಪ್ರತಿ ತಿಂಗಳು ಅರ್ಧಪುಟ ಜಾಹೀರಾತು ನೀಡಲಾಗುತ್ತಿದೆ. ಅದನ್ನು ಒಂದು ಪುಟಕ್ಕೆ ವಿಸ್ತರಿಸಲು ಚಿಂತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು  ಸಮಸ್ಯೆಗಳಿಗೆ ಸ್ಪಂದಿಸಲಾಗುವುದು  ಎಂದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಂಸದ ಸಿ.ಎಸ್.ಪುಟ್ಟರಾಜು, ಪತ್ರಕರ್ತರು ಪ್ರಾಮಾಣಿಕವಾಗಿ, ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಸತ್ಯ ಶೋಧನೆ ವರದಿಗಳನ್ನು ಪ್ರಕಟಿಸಬೇಕೇ ವಿನಃ ಮುಜುಗರ ಉಂಟುಮಾಡುವ ವರದಿಗಳನ್ನು ಪ್ರಕಟಿಸುವ ಮೂಲಕ ಜನರಲ್ಲಿ ಗೊಂದಲ ಮೂಡಿಸಬಾರದು ಎಂದು ಮನವಿ ಮಾಡಿದರು.

ಈ ವೇಳೆ ನುಡಿಭಾರತಿ ಪತ್ರಿಕೆ ಸಂಪಾದಕ ಎ.ಎಲ್.ಬಸವೇಗೌಡ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ಪತ್ರಕರ್ತರಾದ ಕೆ.ಎನ್.ರವಿ, ಕೆ.ಎನ್.ಮಂಜುನಾಥ್,  ಬೂದನೂರು ಸತೀಶ್, ಡಿ.ಎಲ್.ಲಿಂಗರಾಜು, ಗಣಂಗೂರು ನಂಜೇಗೌಡ, ಎಚ್.ಆರ್.ಲೋಕೇಶ್, ಎಂ.ಎಸ್.ಮೂರ್ತಿ, ಯೋಗೇಶ್, ಮಲ್ಲಿಕಾರ್ಜುನ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎನ್.ಅಪ್ಪಾಜಿಗೌಡ, ರಾಜ್ಯ ಕಾರ್ಯನಿರ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ರಾಜು, ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ಜಿಲ್ಲಾಧ್ಯಕ್ಷ ಸೋಮಶೇಖರ ಕೆರಗೋಡು, ಪ್ರಧಾನ ಕಾರ್ಯದರ್ಶಿ ಕೆ.ಸಿ.ಮಂಜುನಾಥ್, ಪಿ.ಜೆ.ಚೈತನ್ಯಕುಮಾರ್, ಡಿ.ಎಲ್.ಲಿಂಗರಾಜು, ಬಿ.ಪಿ.ಪ್ರಕಾಶ್, ಬಿ.ಎಸ್.ಜಯರಾಂ, ಕೆ.ಎನ್.ನವೀನ್‍ಕುಮಾರ್, ಕೆ.ಶಂಭು, ನಾಗೇಶ್, ಬಸವರಾಜ ಹೆಗ್ಗಡೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News