ಲಿಂಗಾಯತ ಧರ್ಮಕ್ಕಾಗಿ ಸುಪ್ರೀಂ ಕೋರ್ಟ್ ಗೆ ಹೋಗಲು ಸಿದ್ಧ: ಎಂ.ಬಿ.ಪಾಟೀಲ್
ಬೆಂಗಳೂರು, ಸೆ.4: ರಾಜ್ಯ ಮತ್ತು ಕೇಂದ್ರ ಸರಕಾರಗಳು ಲಿಂಗಾಯತ ಪ್ರತ್ಯೇಕ ಧರ್ಮವನ್ನಾಗಿ ಘೋಷಿಸದಿದ್ದಲ್ಲಿ, ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಲಾಗುವುದೆಂದು ನೀರಾವರಿ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಹೇಳಿದ್ದಾರೆ.
ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಪಕ್ಷಾತೀತ ಹೋರಾಟ ನಡೆಸಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ನಮ್ಮ ಬೇಡಿಕೆ ಈಡೇರುವ ವಿಶ್ವಾಸವಿದೆ. ಒಂದು ವೇಳೆ ಸರಕಾರಗಳಿಂದ ಆಗದಿದ್ದರೆ, ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಲಾಗುವುದು. ಇದಕ್ಕೆ ಸಂಬಂಧಪಟ್ಟಂತೆ ನಮ್ಮ ಬಳಿ ದಾಖಲೆಗಳಿವೆ ಎಂದು ತಿಳಿಸಿದರು.
ಪ್ರತ್ಯೇಕ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ. ಇದು ನೂರಾರು ವರ್ಷಗಳಿಂದ ಬಂದಿರುವ ಬೇಡಿಕೆಯಾಗಿದೆ. ಅಲ್ಲದೆ, 2013ರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಪ್ರಮುಖರು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕೆಂದು ಆಗ್ರಹಿಸಿ ಪತ್ರಯೊಂದಕ್ಕೆ ಸಹಿ ಹಾಕಿ ಕೇಂದ್ರಕ್ಕೆ ಕಳಹಿಸಲಾಗಿತ್ತು ಎಂದು ಎಂ.ಬಿ.ಪಾಟೀಲ್ ನುಡಿದರು.
ದಾಖಲೆ ನೀಡಲಿ:ವೀರಶೈವ ಪ್ರತ್ಯೇಕ ಧರ್ಮ ಬೇಕು ಎಂದು ಹೇಳುವವರು ದಾಖಲೆ ನೀಡಲಿ ಎಂದು ಸವಾಲು ಹಾಕಿದ ಅವರು, ವೀರಶೈವರು ಬೇರೆ ಎಂದು ನಾವು ಎಂದೂ ಹೇಳಿಲ್ಲ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಸಮಿತಿ ರಚಿಸಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಪಟ್ಟಂತೆ ತಜ್ಞರ ಸಮಿತಿ ರಚನೆ ಮಾಡಬೇಕು. ಲಿಂಗಾಯತ ಧರ್ಮವಾಗಲು ಬೇಕಿರುವ ಎಲ್ಲ ದಾಖಲೆಗಳಿವೆ. ಸಂವಿಧಾನದ ಚೌಕಟ್ಟಿನಲ್ಲಿ ಇದು ಸ್ವತಂತ್ರ ಧರ್ಮವಾಗಲಿದೆ. ಅಲ್ಲದೆ, ರಾಜ್ಯ ಸರಕಾರದ ನಿರ್ಧಾರವನ್ನು ಗಮನಿಸಿ ಕೇಂದ್ರಕ್ಕೆ ನಿಯೋಗ ಹೋಗಲಿದೆ
-ಎಂ.ಬಿ.ಪಾಟೀಲ್, ನೀರಾವರಿ ಸಚಿವ