×
Ad

ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ: ಸಚಿವ ಟಿ.ಬಿ. ಜಯಚಂದ್ರ

Update: 2017-09-04 18:59 IST

ಬೆಂಗಳೂರು, ಸೆ. 4: ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕ ಮರಳು ನೀತಿ ಜಾರಿಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಂಪುಟ ಉಪ ಸಮಿತಿಯ ಶಿಫಾರಸ್ಸುಗಳನ್ನು ಸಂಪುಟ ಅಂಗೀಕರಿಸಿದೆ ಎಂದರು.

ಕರಾವಳಿಯಲ್ಲಿ ಕರಾವಳಿ ನಿಯಂತ್ರಣಾ ವಲಯ(ಸಿಆರ್‌ಝಡ್) ಹಾಗೂ ಕರಾವಳಿ ನಿಯಂತ್ರಣೇತರ ವಲಯ(ನಾನ್ ಸಿಆರ್‌ಝಡ್)ದಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡುವ ಬಗ್ಗೆ ಸಂಪುಟವು ಪರಾಮರ್ಶಿಸಿ ಕರಾವಳಿ ನಿಯಂತ್ರಣೇತರ ವಲಯದಲ್ಲಿ ಸಾಂಪ್ರದಾಯಕ ಮರಳು ಗಣಿಗಾರಿಕೆಗೆ ಅನುಮತಿ ನೀಡಿದೆ.

ಈ ಪ್ರದೇಶದಲ್ಲಿ ಬೃಹತ್ ಯಂತ್ರಗಳನ್ನು ಬಳಸಿ ಮರಳು ಗಣಿಗಾರಿಕೆಗೆ ನಿಷೇಧ ಹೇರಲು ಹಾಗೂ ಕರಾವಳಿ ನಿಯಂತ್ರಣೇತರ ವಲಯದಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡುವ ಅಧಿಕಾರವನ್ನು ತಹಸೀಲ್ದಾರ್ ಅವರಿಗೆ ನೀಡಲು ಸಂಪುಟ ನಿರ್ಧರಿಸಿದೆ ಎಂದು ಅವರು ತಿಳಿಸಿದರು.

‘ರಾಜ್ಯದಲ್ಲಿ ಚಿಕನ್‌ಗುನ್ಯ, ಡೆಂಗ್ ಮತ್ತು ವೈರಾಣು ಜ್ವರ ಕಾಣಿಸಿಕೊಂಡರೆ ಜನ ಸಾಮಾನ್ಯರು ಆತಂಕಗೊಳ್ಳುವ ಅಗತ್ಯವಿಲ್ಲ. ಚಿಕನ್‌ಗುನ್ಯ, ಡೆಂಗ್ ಜ್ವರ ನಿಯಂತ್ರಣಕ್ಕೆ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಅಲ್ಲದೆ, ಸಾರ್ವಜನಿಕರಲ್ಲಿ ಆರೋಗ್ಯ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಲಾಗುವುದು’

- ಟಿ.ಬಿ.ಜಯಚಂದ್ರ ಕಾನೂನು ಸಚಿವ

‘ಬಾಬಾಬುಡಾನ್ ವಿವಾದ ಬಗೆಹರಿಸುವ ಸಂಬಂಧ ಸುಪ್ರೀಂ ಕೋರ್ಟ್ ಸೂಚನೆ ಆಧರಿಸಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತದಲ್ಲಿ ಮೂರು ಮಂದಿ ಸದಸ್ಯರ ಸಮಿತಿಯನ್ನು ರಚಿಸಲಾಗಿದೆ’

- ಜಯಚಂದ್ರ ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News