×
Ad

ತೋಟಗಾರಿಕಾ ಇಲಾಖೆಯಲ್ಲೂ ಕೃಷಿ ಭಾಗ್ಯ ಯೋಜನೆ ಜಾರಿಗೆ ಸಂಪುಟ ನಿರ್ಧಾರ

Update: 2017-09-04 19:03 IST

ಬೆಂಗಳೂರು, ಸೆ. 4: ಆಯವ್ಯಯದಲ್ಲಿ ಘೋಷಿಸಿರುವಂತೆ ಕೃಷಿ ಇಲಾಖೆ ಮಾದರಿಯಲ್ಲೆ ತೋಟಗಾರಿಕಾ ಇಲಾಖೆಯಲ್ಲೂ ‘ಕೃಷಿ ಭಾಗ್ಯ’ ಯೋಜನೆಯನ್ನು ಅನುಷ್ಠಾನಗೊಳಿಸಲು ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ರಾಜ್ಯದ 25 ಜಿಲ್ಲೆಗಳ 128 ತಾಲೂಕುಗಳಲ್ಲಿ ತೋಟಗಾರಿಕಾ ಬೆಳೆಗಳಾದ ಹಣ್ಣು-ತರಕಾರಿಗಳನ್ನು ಪಾಲಿಹೌಸ್‌ಗಳಲ್ಲಿ ಬೆಳೆಸಲು ಅನುವಾಗುವಂತೆ ಸಹಾಯಧನ ನೀಡುವ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದರು.

ಎಸ್ಸಿ-ಎಸ್ಟಿಗಳಿಗೆ ರಿಯಾಯಿತಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಪಾಲಿಹೌಸ್ ನಿರ್ಮಿಸಿದರೆ ಶೇ.90ರಷ್ಟು ಧನಸಹಾಯ ಹಾಗೂ ಇತರೆ ವರ್ಗದವರಿಗೆ ಶೇ.50ರಷ್ಟು ಧನ ಸಹಾಯ ನೀಡುವ ಈ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 200ಕೋಟಿ ರೂ.ಅನುದಾನವನ್ನು ಮೀಸಲಿರಿಸಲು ಸಂಪುಟ ನಿರ್ಧರಿಸಿದೆ ಎಂದು ಅವರು ಹೇಳಿದರು.

ಕೃಷಿಯಂತ್ರ ಧಾರೆ:ರಾಜ್ಯದ 743 ಹೋಬಳಿಗಳ ಪೈಕಿ ಈಗಾಗಲೇ ಸುಮಾರು 500 ಹೋಬಳಿಗಳಲ್ಲಿ ಕೃಷಿ ಯಂತ್ರಧಾರೆ ಯೋಜನೆಯು ಅನುಷ್ಠಾನಗೊಂಡಿದೆ. ಉಳಿದ ಸುಮಾರು 250 ಹೋಬಳಿಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ನೆರವಾಗುವ ಯಂತ್ರೋಪಕರಣಗಳನ್ನು ಕಡಿಮೆ ದರದಲ್ಲಿ ಬಾಡಿಗೆ ರೂಪದಲ್ಲಿ ನೀಡಿ ಕೃಷಿ ಚಟುವಟಿಕೆಗಳನ್ನು ವಿಸ್ತರಿಸುವ ಕೃಷಿ ಯಂತ್ರಧಾರೆ ಯೋಜನೆಗೆ ವಿಶೇಷ ಸವಲತ್ತುಗಳನ್ನು ನೀಡಲು ಸಂಪುಟ ಸಮ್ಮತಿಸಿದೆ ಎಂದು ಹೇಳಿದರು.

10 ಲಕ್ಷ ರೂ.ಒಳಗಿನ ವಾರ್ಷಿಕ ವಹಿವಾಟು ನಡೆಸುವ ಘಟಕಕ್ಕೆ ಸರಕಾರದಿಂದ 5 ಲಕ್ಷ ರೂ.ಸಹಾಯ ಧನ ಹಾಗೂ ಹೊಸದಾಗಿ ಯಂತ್ರೋಪಕರಗಳನ್ನು ಖರೀದಿಸಲೂ ಅಗತ್ಯ ಆರ್ಥಿಕ ನೆರವನ್ನು ಒದಗಿಸಲು ಸಂಪುಟ ತೀರ್ಮಾನಿಸಿದೆ ಎಂದು ಅವರು ತಿಳಿಸಿದರು. ಅಂತೆಯೇ, 10ಲಕ್ಷ ರೂ.ಗಳಿಗಿಂತಲೂ ಕಡಿಮೆ ವಾರ್ಷಿಕ ವಹಿವಾಟು ನಡೆಸಿದ ಘಟಕಕ್ಕೆ 2.50 ಲಕ್ಷ ರೂ.ಸಹಾಯಧನ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಈ ಯೋಜನೆಗೆ ಒಟ್ಟು 122ಕೋಟಿ ರೂ.ಮೊತ್ತವನ್ನು ಮೀಸಲಿರಿಸಲಾಗಿದೆ ಎಂದು ಜಯಚಂದ್ರ ವಿವರಿಸಿದರು.

300 ಕೋಟಿ ರೂ.ಗೆ ಅನುಮೋದನೆ: ಬಜೆಟ್‌ನಲ್ಲಿ ಪ್ರಕಟಿಸಿದಂತೆ ಸಿಎಂ ಮೂಲಸೌಕರ್ಯ ನೀರುಗಾಲುವೆ ಕಾಮಗಾರಿಗಳು ಹಾಗೂ ತುರ್ತು ಕಾಮಗಾರಿಗಳಿಗೆ ಸಂಪುಟವು ಅನುಮೋದನೆ ನೀಡಿದೆ. ಈ ಯೋಜನೆಯಡಿ ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾಗಿರುವ 842 ಕಿ.ಮೀ ರಾಜಕಾಲುವೆ ಕಾಮಗಾರಿಗಳ ಅನುಷ್ಠಾನಕ್ಕೆ 300ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.

ಮೆಟ್ರೋ ಭೂಸ್ವಾಧೀನಕ್ಕೆ ಹಣ ಮಂಜೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ‘ನಮ್ಮ ಮೆಟ್ರೋ’ ಎರಡನೇ ಹಂತ ಯೋಜನೆಯ ಭೂಸ್ವಾಧೀನಕ್ಕೆ ಹೆಚ್ಚುವರಿಯಾಗಿ 2187.46 ಕೋಟಿ ರೂ.ಸೇರಿ ಒಟ್ಟಾರೆ 6,293 ಕೋಟಿ ರೂ.ಮೊತ್ತಕ್ಕೆ ಸಂಪುಟ ಮಂಜೂರಾತಿ ನೀಡಿದೆ ಎಂದು ಹೇಳಿದರು.

ಸ್ಯಾನಿಟರಿ ನ್ಯಾಪ್‌ಕಿನ್‌ಗೆ 47.96ಕೋಟಿ ರೂ.: 
ಆಯವ್ಯಯದಲ್ಲಿ ಘೋಷಿಸಿದಂತೆ ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಯೋಜನೆ ಹಾಗೂ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ ಕಾರ್ಯಕ್ರಮಗಳಡಿ ಕಬ್ಬಿಣಾಂಶವುಳ್ಳ ಮಾತ್ರೆಗಳನ್ನು 10.4 ಕೋಟಿ ರೂ.ವೆಚ್ಚದಲ್ಲಿ ಹಾಗೂ ಬಾಲಕಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು 47.96 ಕೋಟಿ ರೂ.ವೆಚ್ಚದಲ್ಲಿ ಖರೀದಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಬಳಕೆಯಾಗದ ಕಾನೂನುಗಳ ನಿರಶನ:ಹಲವು ವರ್ಷಗಳಿಂದ ಬಳಕೆಯಾಗದ ರಾಜ್ಯದ 135 ಕಾನೂನುಗಳು ಹಾಗೂ ಕೇಂದ್ರ ಸರಕಾರದ ಎಂಟು ಕಾನೂನುಗಳನ್ನು ನಿರಸನಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಜಯಚಂದ್ರ ಇದೇ ವೇಳೆ ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದಲ್ಲಿ 13.25ಕೋಟಿ ರೂ.ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದ ಪರಿಷ್ಕೃತ ಅಂದಾಜಿಗೆ ಸಂಪುಟವು ಅನುಮೋದನೆ ನೀಡಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹೇಮಾವತಿ ವಸಾಹತು ಜಕ್ಕನಹಳ್ಳಿಯಲ್ಲಿರುವ 5.16 ಎಕರೆ ಜಾಗವನ್ನು ಆರೋಗ್ಯ, ಕಂದಾಯ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮಾರ್ಗಸೂಚಿ ದರದಲ್ಲಿ ಹಸ್ತಾಂತರಿಸಲು ಸಂಪುಟ ಒಪ್ಪಿಗೆ ನೀಡಿದೆ.
ವಸತಿ ಸಮುಚ್ಛಯ ನಿರ್ಮಾಣಕ್ಕೆ ಅನುಮೋದನೆ:ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬೋನಾಚನಪಲ್ಲಿ ಮತ್ತು ಪೆದ್ದನಾಚನಪಲ್ಲಿ ಗ್ರಾಮಗಳಲ್ಲಿ 6.88 ಕೋಟಿ ರೂ.ವೆಚ್ಚದಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ವಸತಿ ಸಮುಚ್ಛಯವನ್ನು ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

  ಅದೇ ರೀತಿ, ಕೋರಮಂಗಲದಿಂದ ಶಿನಿವಾಗಿಲುವರೆಗೆ ತ್ಯಾಜ್ಯ ನೀರು ಶುದ್ಧೀಕರಿಸಿ, ಶುದ್ಧೀಕರಿಸಿದ ನೀರನ್ನು ಬೆಳ್ಳಂದೂರು ಕೆರೆಗೆ ಹರಿಸುವ 12ಕೋಟಿ ರೂ. ವೆಚ್ಚದ ಮೂರು ವರ್ಷಗಳ ಕ್ರಿಯಾ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ.

ರಾಜ್ಯಪಾಲರ ಅಂಕಿತದ ವಿಶ್ವಾಸ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರ ಭಡ್ತಿ ಮೀಸಲಾತಿ ಕುರಿತ ಸಚಿವ ಸಂಪುಟದ ಶಿಫಾರಸ್ಸಿನ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದು, ರಾಜ್ಯಪಾಲರು ಸುಗ್ರೀವಾಜ್ಞೆಗೆ ಶೀಘ್ರದಲ್ಲೇ ಅಂಕಿತ ಹಾಕುವ ವಿಶ್ವಾಸವಿದೆ. ರಾಜ್ಯ ಸರಕಾರ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಕಾಲಾವಧಿ ವಿಸ್ತರಣಾ ಹಾಗೂ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ’
-ಟಿ.ಬಿ.ಜಯಚಂದ್ರ, ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News