ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಹೆಚ್. 206 ರಸ್ತೆ 'ಬ್ಲ್ಯಾಕ್ ಸ್ಪಾಟ್' ಆಗಿ ಘೋಷಣೆ!
ಶಿವಮೊಗ್ಗ, ಸೆ. 4: ಸಾಲು ಸಾಲು ಅಪಘಾತ ಸಂಭವಿಸುತ್ತಿರುವ ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 206 ನ್ನು 'ತೀವ್ರ ಅಪಘಾತ ವಲಯ (ಬ್ಲ್ಯಾಕ್ ಸ್ಪಾಟ್) ವಾಗಿ ಘೋಷಿಸುವಂತೆ ಜಿಲ್ಲಾಡಳಿತವು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ (ಎನ್.ಹೆಚ್.ಎ.ಐ) ಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ.
ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿ.ಸಿ. ಡಾ. ಎಂ. ಲೋಕೇಶ್ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಆರ್‍ಟಿಓ ಶಿವರಾಜ್ ಪಾಟೀಲ್, ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‍ಗಳಾದ ಪ್ರಶಾಂತ್, ಪೀರ್‍ಪಾಷಾ, ಸಂಚಾರಿ ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್‍ಗಳಾದ ಸಂತೋಷ್ ಕುಮಾರ್, ರಾಂಕುಮಾರ್ ಸೇರಿದಂತೆ ಮೊದಲಾದವರಿದ್ದರು.
ಜಿಲ್ಲೆಯ ಇತಿಹಾಸದಲ್ಲಿ ಇಲ್ಲಿಯವರೆಗೂ ಯಾವೊಂದು ರಸ್ತೆಯನ್ನು 'ಬ್ಲ್ಯಾಕ್ ಸ್ಪಾಟ್' ರಸ್ತೆಯನ್ನಾಗಿ ಘೋಷಣೆ ಮಾಡಿಲ್ಲ. ಇದೇ ಪ್ರಪ್ರಥಮ ಬಾರಿಗೆ 'ಬ್ಲ್ಯಾಕ್ ಸ್ಪಾಟ್' ರಸ್ತೆ ಎಂಬ ಕುಖ್ಯಾತಿಗೆ ಶಿವಮೊಗ್ಗ - ಸಾಗರ ನಡುವಿನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯದ್ದಾಗಿದೆ.
ಏನೀದು 'ಬ್ಲ್ಯಾಕ್ ಸ್ಪಾಟ್?': ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದ ನಿಯಮದ ಪ್ರಕಾರ, 3 ತಿಂಗಳ ಅವಧಿಯಲ್ಲಿ 500 ಮೀಟರ್ ಅಂತರದಲ್ಲಿ ನಿರಂತರವಾಗಿ ಹೆದ್ದಾರಿಯ ಮೇಲೆ ನಿರಂತರವಾಗಿ ಅಪಘಾತ ಸಂಭವಿಸಿ, ಆರಕ್ಕಿಂತ ಹೆಚ್ಚು ಜನ ಮೃತಪಟ್ಟಿದ್ದರೆ ಅಂತಹ ರಸ್ತೆಗಳನ್ನು 'ಬ್ಲ್ಯಾಕ್ ಸ್ಪಾಟ್' ಆಗಿ ಘೋಷಣೆ ಮಾಡಿ ಪ್ರಸ್ತಾವನೆ ಸಲ್ಲಿಸುವ ಅವಕಾಶವನ್ನು ಆಯಾ ಜಿಲ್ಲಾಡಳಿತಗಳಿಗೆ ಕಲ್ಪಿಸಿಕೊಟ್ಟಿದೆ.
'ಬ್ಲ್ಯಾಕ್ ಸ್ಪಾಟ್' ಎಂದು ಗುರುತಿಸಲಾದ ರಸ್ತೆಯನ್ನು ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಕಾಲಮಿತಿಯಲ್ಲಿ ಸೂಕ್ತ ಪರಿಹಾರ ಕ್ರಮಕೈಗೊಳ್ಳಲಿದೆ. ಇದಕ್ಕಾಗಿಯೇ ವಿಶೇಷ ಅನುದಾನದ ಲಭ್ಯತೆಯಿದ್ದು, ಇದರಡಿ ವೈಜ್ಞಾನಿಕವಾಗಿ ರಸ್ತೆ ನಿರ್ಮಾಣಕ್ಕೆ ಪ್ರಾಧಿಕಾರ ಕ್ರಮಕೈಗೊಳ್ಳಲಿದೆ.
ಅಪಘಾತಕ್ಕೆ ಕಾರಣವಾಗುವ ರಸ್ತೆಗಳಲ್ಲಿರುವ ತಿರುವು, ಉಬ್ಬುಗಳನ್ನು ಸರಿಪಡಿಸುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಸೂಚನಾ ಫಲಕ, ಸಿ. ಸಿ. ಕ್ಯಾಮರಾ ಅಳವಡಿಕೆ, ವಾಹನಗಳ ವೇಗ ನಿಯಂತ್ರಣ ಸೇರಿದಂತೆ ಹತ್ತು ಹಲವು ಅಪಘಾತ ನಿಯಂತ್ರಣ ಪರಿಹಾರೋಪಾಯ ಕ್ರಮಗಳನ್ನು ಅನುಷ್ಠಾನಗೊಳಿಸಲಿದೆ.
ಅಪಘಾತ ವಲಯ: ಪ್ರಸ್ತುತ ಜಿಲ್ಲಾಡಳಿತ 'ಬ್ಲ್ಯಾಕ್ ಸ್ಪಾಟ್' ಎಂದು ಗುರುತಿಸಿರುವ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಎನ್. ಹೆಚ್. 206 ರಸ್ತೆಯಲ್ಲಿ ಸಾಲು ಸಾಲು ಅಪಘಾತಗಳು ಸಂಭವಿಸುತ್ತಿವೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಸರಿಸಮಾರು 15 ಜನ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.
ಮೇ ತಿಂಗಳ 3 ರಂದು ನಡೆದ ಅವಘಡದಲ್ಲಿ 7 ಜನ, ಮೇ 15 ರಂದು 2 ಹಾಗೂ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 6 ಜನ ಮೃತಪಟ್ಟಿದ್ದರು. ಈ ರಸ್ತೆಯಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತವು ಇದೀಗ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯನ್ನು ಅದಿಕೃತವಾಗಿ 'ಬ್ಲ್ಯಾಕ್ ಸ್ಪಾಟ್' ಆಗಿ ಘೋಷಿಸಿ ಎನ್.ಹೆಚ್.ಎ.ಐ.ಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ.
ಮೆಚ್ಚುಗೆ: ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಹೆಚ್. ರಸ್ತೆಯನ್ನು ಬ್ಲ್ಯಾಕ್ ಸ್ಪಾಟ್ ಆಗಿ ಘೋಷಿಸಿ, ಅಪಘಾತ ನಿಯಂತ್ರಣಕ್ಕೆ ಮುಂದಾಗಿರುವ ಜಿಲ್ಲಾಡಳಿತದ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಈ ರಸ್ತೆಯಲ್ಲಿ ಇತ್ತೀಚೆಗೆ ಸಾಲುಸಾಲು ಅವಘಡಗಳು ಸಂಭವಿಸುತ್ತಿವೆ. ಇದರಿಂದ ಹಲವು ಅಮಾಯಕರು ಸಾವು ನೋವಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ವಾಹನ ಸವಾರರ ಮಿತಿಮೀರಿದ ವೇಗ, ಅಜಾಗರೂಕ ಚಾಲನೆ ಹಾಗೂ ರಸ್ತೆಯಲ್ಲಿರುವ ಅವೈಜ್ಞಾನಿಕ ತಿರುವು, ಉಬ್ಬುಗಳು ಕಾರಣವಾಗಿವೆ.
'ಬ್ಲ್ಯಾಕ್ ಸ್ಪಾಟ್ ಘೋಷಣೆಯ ನಂತರ ರಸ್ತೆಯನ್ನು ಸಮಗ್ರವಾಗಿ ಅಭಿವೃದ್ದಿಗೊಳಿಸಿ, ಅಪಘಾತ ವಲಯವಾಗಿ ರೂಪಿಸುವುದರ ಹಿನ್ನೆಲೆಯಲ್ಲಿ ಅಪಘಾತಗಳಿಗೆ ಸಂಪೂರ್ಣವಾಗಿ ಕಡಿವಾಣ ಬೀಳಲಿದೆ. ಇದರಿಂದ ಅಮಾಯಕರು ಸಾವುನೋವಿಗೆ ತುತ್ತಾಗುವುದು ತಪ್ಪಲಿದೆ. ಜಿಲ್ಲಾಡಳಿತದ ಕ್ರಮ ಸಕಾಲಿಕ ಹಾಗೂ ಸ್ವಾಗತಾರ್ಹವಾದುದಾಗಿದೆ' ಎಂದು ಅಭಿಪ್ರಾಯ ಪಡುತ್ತಾರೆ.
'ಅಪಘಾತಗಳ ಕಡಿವಾಣಕ್ಕೆ ಸಹಕಾರಿ' : ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್
'ಶಿವಮೊಗ್ಗ - ಸಾಗರ ನಡುವಿನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 206 ಯ ಭೌಗೋಳಿಕ ವಿನ್ಯಾಸ ಉಬ್ಬು-ತಗ್ಗುಗಳಿಂದ ಕೂಡಿದೆ. ಇದು ಹೆಚ್ಚಿನ ಅಪಘಾತಗಳಿಗೆ ಮುಖ್ಯ ಕಾರಣವಾಗಿದೆ. ತಾತ್ಕಾಲಿಕ ಸುರಕ್ಷತಾ ಕ್ರಮವಾಗಿ ಬ್ಯಾರಿಕೇಡ್, ಎಚ್ಚರಿಕೆ ಫಲಕಗಳ ಅಳವಡಿಕೆ, ಸಿಬ್ಬಂದಿ ನಿಯೋಜನೆಯಂತಹ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಎಂಜಿನಿಯರ್‍ಗಳಿಗೆ ಸೂಚಿಸಲಾಗಿದೆ. ಬ್ಲ್ಯಾಕ್ ಸ್ಪಾಟ್ ವಲಯದಲ್ಲಿ ಮುಂದಿನ ದಿನಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ಹಲವು ಕ್ರಮಕೈಗೊಳ್ಳುವುದರಿಂದ ಅಪಘಾತಗಳ ಕಡಿವಾಣಕ್ಕೆ ಸಹಕಾರಿಯಾಗಲಿದೆ' ಎಂದು ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ತಿಳಿಸಿದ್ದಾರೆ.