×
Ad

​ಹಿಂದೂ ಧರ್ಮಕ್ಕೆ ಅನಗತ್ಯ ಆತಂಕ ಏಕೆ: ಸಚಿವ ಎಂ.ಬಿ.ಪಾಟೀಲ್

Update: 2017-09-04 19:51 IST

ಬೆಂಗಳೂರು, ಸೆ.4: ಲಿಂಗಾಯತ ಧರ್ಮ ಪ್ರತ್ಯೇಕವಾದರೆ ಯಾರಿಗೂ ಹಾನಿ ಆಗುವುದಿಲ್ಲ. ಆದರೆ, ಈ ಬಗ್ಗೆ ಹಿಂದೂ ಧರ್ಮಕ್ಕೆ ಅನಗತ್ಯ ಆತಂಕ ಏಕೆ ಎಂದು ನೀರಾವರಿ ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ.

 ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲಿಂಗಾಯತರು ಹಿಂದೂಗಳ ಭಾಗ ಅಲ್ಲ. ಜೈನ ಧರ್ಮ ಹೇಗೋ ಹಾಗೇ ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು. ಹಿಂದೂ ಧರ್ಮಕ್ಕೂ ಲಿಂಗಾಯತಕ್ಕೂ ಹೋಲಿಕೆ ಇಲ್ಲ. ವರ್ಣಾಶ್ರಮ, ಜಾತಿ ಪದ್ದತಿ, ಹಿಂದೂ ಧರ್ಮದಂತೆ ನಮ್ಮಲ್ಲಿ ಇಲ್ಲ ಎಂದ ಅವರು, ಲಿಂಗಾಯತ ಧರ್ಮವಾದರೆ ಹಿಂದೂ ಧರ್ಮ ಒಡೆಯುತ್ತದೆ ಎನ್ನುವುದು ಸುಳ್ಳು. ಬೌದ್ದ ಧರ್ಮವಾದಾಗ, ಜೈನ ಧರ್ಮವಾದಾಗ ಹಿಂದೂ ಧರ್ಮಕ್ಕೆ ತೊಂದರೆಯಾಗಿಲ್ಲ ಎಂದರು.

ವೀರಶೈವರು ತಮಿಳುನಾಡು, ಕೇರಳ ಭಾಗಗಳಿಂದ ಬಂದಿದ್ದಾರೆ. ಅಲ್ಲದೆ, ಲಿಂಗಾಯತದಲ್ಲಿ 99 ಉಪಜಾತಿಗಳಿದ್ದು, ಅದರಲ್ಲಿ ವೀರಶೈವ 38ನೆ ಉಪಜಾತಿ ಆಗಿದೆ. ಈ ಬಗ್ಗೆ ದಾಖಲೆಗಳಲ್ಲೂ ಉಲ್ಲೇಖವಾಗಿವೆ ಎಂದ ಅವರು, ನಮ್ಮ ಹೋರಾಟ ವೀರಶೈವ, ಜಂಗಮರ ವಿರುದ್ಧ ಅಲ್ಲ ಬಸವಣ್ಣನ ಆದರ್ಶಗಳನ್ನು ಜೀವಂತವಾಗಿಡಲು ಎಂದು ತಿಳಿಸಿದರು.

ಷಡ್ಯಂತ್ರ:ಬಾಲ್ಯದಲ್ಲಿ ನನಗೆ ಬಸವ ಜಯಂತಿ ಎಂದರೆ, ಎತ್ತಿಗೆ ಪೂಜೆ ಮಾಡುವುದು ಎಂದು ಹೇಳಿದ್ದರು. ಅಷ್ಟೇ ಏಕೆ, ಬಸವಣ್ಣನ ಜನ್ಮ ಸ್ಥಳ ಬಾಗೇವಾಡಿಯಲ್ಲೂ ಬಸವೇಶ್ವರ ದೇವಾಲಯ ನಿರ್ಮಿಸಿ ಅಲ್ಲಿನ ನಂದಿ ವಿಗ್ರಹಕ್ಕೆ ಪೂಜೆ ಮಾಡಿ, ಇವರೇ ಬಸವಣ್ಣ ಎಂದಿದ್ದರು. ಇದರ ಹಿಂದೆ ಬಹುದೊಡ್ಡ ಷಡ್ಯಂತ್ರ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

 ‘ಬುದ್ಧನಂತೆ ಬಸವಣ್ಣ’

900 ವರ್ಷ ಬಸವಣ್ಣನಿಗೆ ನಾವು ಮೋಸ ಮಾಡಿದ್ದೇವೆ. ಬಸವಣ್ಣ ಅವರನ್ನು ಬುದ್ಧನಂತೆಯೇ ಕಾಣಬೇಕಿತ್ತು. ಜಾತಿ ರಹಿತ ಸಮಾಜಕ್ಕಾಗಿಯೇ ಲಿಂಗಾಯತ ಧರ್ಮ ರಚನೆ ಮಾಡಿದ್ದರು ಬಸವಣ್ಣ. ಅವರ ಹೆಸರು ಜಾಗತಿಕ ಮಟ್ಟದಲ್ಲಿರಬೇಕಿತ್ತು. ಆದರೆ, ಇಲ್ಲಿನ ಷಡ್ಯಂತ್ರದಿಂದ ಅದು ಆಗಲಿಲ್ಲ.
-ಎಂ.ಬಿ.ಪಾಟೀಲ್, ನೀರಾವರಿ ಸಚಿವ
 
ನನ್ನ ಪತ್ನಿ ಹಿಂದೂ ದೇವರನ್ನು ಪೂಜಿಸುತ್ತಿದ್ದಾರೆ. ಆದರೆ, ಇಂತಹ ಸಂಸ್ಕೃತಿಯಿಂದ ಹೊರಬರಲು ಒಂದೇ ಬಾರಿ ಆಗುವುದಿಲ್ಲ. ಹಂತ ಹಂತವಾಗಿ ಬದಲಾಗಬೇಕಿದೆ. ನಾನು ಬಸವಣ್ಣನನ್ನೆ ಆರಾಧನೆ ಮಾಡುತ್ತೇನೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News