ಜಾನಪದ ಕಲೆಗೆ ಸರಕಾರ ದ್ರೋಹ ಎಸಗುತ್ತಿದೆ: ಬಕ್ಕಿ ಮಂಜುನಾಥ್ ಆರೋಪ
ಮೂಡಿಗೆರೆ, ಸೆ.4: ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಪ್ರತಿವರ್ಷ ನಡೆಯುವ ಪ್ರತಿಭಾ ಕಾರಂಜಿಯಲ್ಲಿ ಜಾನಪದ ನೃತ್ಯ ಕಲಾಪ್ರಕಾರವನ್ನು ಪರಿಗಣಿಸದೇ ರಾಜ್ಯ ಸರಕಾರ ದ್ರೋಹ ಎಸಗುತ್ತಿದೆ ಎಂದು ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಬಕ್ಕಿ ಮಂಜುನಾಥ್ ಆರೋಪಿಸಿದರು.
ಅವರು ಸೋಮವಾರ ಪಟ್ಟಣದ ಪತ್ರಿಕಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಜಾನಪದ ಪರಿಷತ್ತಿನ ಪದಾಧಿಕಾರಿಗಳು ವಿವಿಧ ಶಾಲೆಗಳಿಗೆ ಭೇಟಿ ನೀಡಿ, ರಾಜ್ಯದ ಜಾನಪದ ಕಲಾಪ್ರಕಾರಗಳಾದ ಡೊಳ್ಳುಕುಣಿತ, ವೀರಗಾಸೆ, ಪೂಜಾಕುಣಿತ, ಪಟದಕುಣಿತ, ನಂದಿದ್ವಜಾ, ಕರಗ, ಸೋಮನಕುಣಿತ, ಸೋಲಿಗರ ನೃತ್ಯ, ಅಂಡಿಕೆ ಪಿಂಟಿಕೆ, ಮಲೆನಾಡಿನ ಸುಗ್ಗಿ ಕುಣಿತ ಮುಂತಾದ ಎಲ್ಲಾ ಪ್ರಕಾರಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡುತ್ತಿದೆ.
ತರಬೇತಿ ಪಡೆದ ವಿದ್ಯಾರ್ಥಿಗಳು ಈ ಎಲ್ಲಾ ಕಲಾಪ್ರಕಾರಗಳನ್ನು ಬದಿಗಿರಿಸಿ ಶಿಕ್ಷಣ ಇಲಾಖೆ ಹೇಳಿಕೊಟ್ಟ ಪಾಶ್ಚಿಮಾತ್ಯ ನೃತ್ಯಗಳನ್ನು ಮಾತ್ರ ಪ್ರತಿಭಾಕಾರಂಜಿಗಳಲ್ಲಿ ಪ್ರದರ್ಶಿಸುತ್ತಿದ್ದಾರೆ. ಶಿಕ್ಷಣ ಇಲಾಖೆ ಜಾನಪದ ಕಲಾಪ್ರಕಾರಗಳನ್ನು ಕಡೆಗಣಿಸುತ್ತಿರುವುದು ಇದರಿಂದ ಸಾಬೀತಾಗಿದೆ ಎಂದು ದೂರಿದರು.
ಕರ್ನಾಟಕ ಜಾನಪದ ನೃತ್ಯ ಕಲಾಪ್ರಕಾರಗಳು ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ. ಆದರೂ ಇವುಗಳನ್ನು ಪರಿಗಣಿಸದ ಶಿಕ್ಷಣ ಇಲಾಖೆ, ಪ್ರತಿಭಾ ಕಾರಂಜಿಗಳಲ್ಲಿ ರೆಕಾರ್ಡ್ ಮಾಡಿರುವ ಸಿನಿಮಾ ಹಾಡುಗಳು ಹಾಗೂ ಜಾನಪದ ಶೈಲಿಯ ಹಾಡುಗಳಿಗೆ ವಿದ್ಯಾರ್ಥಿಗಳು ಹಜ್ಜೆ ಹಾಕುತ್ತಾರೆ. ಅಲ್ಲದೆ ಹೊರ ರಾಜ್ಯದ ಕಲಾಪ್ರಕಾರಗಳಿಗೂ ಮನ್ನಣೆ ನೀಡಲಾಗುತ್ತಿದೆ. ಇದು ಪಾಶ್ಚಿಮಾತ್ಯ ಸಂಸ್ಕøತಿಯಾಗಿದೆ. ಶೈಕ್ಷಣಿಕ ಹಂತದಲ್ಲಿಯೆ ವಿದ್ಯಾರ್ಥಿಗಳಿಗಾಗಿ ನಡೆಯುವಂತಹ ಪ್ರತಿಭಾಕಾರಂಜಿಗಳಲ್ಲಿ ರಾಜ್ಯದ ಪ್ರಸಿದ್ದ ಜಾನಪದ ಕಲಾಪ್ರಕಾರಗಳನ್ನು ಅಳವಡಿಸಿಕೊಳ್ಳಬೇಕು. ಸ್ಥಳೀಯ ಕಲಾಪ್ರಕಾರಗಳಿಗೂ ಹೆಚ್ಚಿನ ಮನ್ನಣೆ ನೀಡಬೇಕು.
ಇಲ್ಲವಾದರೆ ಜಾನಪದ ಸಾಹಿತ್ಯವನ್ನು ಬೆಳೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸುವ ಮೂಲಕ ಶೈಕ್ಷಣಿಕ ಹಂತದ ಪ್ರತಿಭಾಕಾರಂಜಿ ಸಹಿತ ಇತರ ಕಲಾತ್ಮಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಜಾನಪದ ಕಲೆಗೆ ಪ್ರೋತ್ಸಾಹ ನೀಡಬೇಕು. ಇಲ್ಲದಿದ್ದರೆ ಮುಂದಿನ ವರ್ಷದಲ್ಲಿ ನಡೆಯುವ ಪ್ರತಿಭಾಕಾರಂಜಿಗಳಿಗೆ ತಡೆ ಹಾಕಲು ಕನ್ನಡ ಜಾನಪದ ಸಾಹಿತ್ಯ ಪರಿಷತ್ತು ಸಿದ್ದವಾಗಿದೆ ಎಂದು ತಿಳಿಸಿದರು.