×
Ad

ವಿಯೆಟ್ನಾಂ ಕಾಳು ಮೆಣಸು ಆಮದು : ಎಪಿಎಂಸಿ ವಿರುದ್ಧ ಸಿಐಡಿ ತನಿಖೆಗೆ ಕಾಂಗ್ರೆಸ್ ಒತ್ತಾಯ

Update: 2017-09-04 20:03 IST

ಮಡಿಕೇರಿ, ಸೆ.4 :ವಿಯೆಟ್ನಾಂನಿಂದ ಕಾಳು ಮೆಣಸನ್ನು ಆಮದು ಮಾಡಿಕೊಂಡು ಗೋಣಿಕೊಪ್ಪ ಎಪಿಎಂಸಿ ಆವರಣದಲ್ಲಿ ನಡೆಸುತ್ತಿರುವ ವ್ಯವಹಾರದಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ನಡೆದಿದೆ ಎಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದೆ. ಎಪಿಎಂಸಿ ಆಡಳಿತ ಮಂಡಳಿ ವಿರುದ್ಧ ಸೆ.11 ರಂದು ಗೋಣಿಕೊಪ್ಪಲಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಪಕ್ಷದ ಜಿಲ್ಲಾ ವಕ್ತಾರರಾದ ಟಾಟು ಮೊಣ್ಣಪ್ಪ ತಿಳಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಅಧ್ಯಕ್ಷರು ಹಾಗೂ  ಆಡಳಿತ ಪಕ್ಷದ ಸದಸ್ಯರು ಜಿಲ್ಲೆಯ ರೈತರಿಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು. 223 ರೂ.ಗಳಿಗೆ ಕಾಳು ಮೆಣಸನ್ನು ಆಮದು ಮಾಡಿಕೊಂಡು ಕೊಡಗಿನ ಕಾಳುಮೆಣಸಿನೊಂದಿಗೆ ಕಲಬೆರಕೆ ಮಾಡಲಾಗುತ್ತಿದೆ. ಈ ವ್ಯವಹಾರದಲ್ಲಿ ಕೊಟ್ಯಾಂತರ ರೂ. ವಂಚನೆಯಾಗಿರುವ ಬಗ್ಗೆ ಸಾಕಷ್ಟು ಸಂಶಯವಿದ್ದು, ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಸಲು ಎಪಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

 ಆಡಳಿತ ಮಂಡಳಿಯ 12 ಮಂದಿ ಸದಸ್ಯರು ರೈತರ ಹಿತ ಕಾಯದೆ ಸ್ವಂತ ಹಿತವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಆಮದಾಗುವ ಸಂದರ್ಭ ಒಂದು ಬಾರಿ ಕಾಳು ಮೆಣಸಿಗೆ ಸೆಸ್ ಪಾವತಿಯಾಗಿದ್ದರು ಮತ್ತೊಮ್ಮೆ ಕಲಬೆರಕೆ ಕಾಳು ಮೆಣಸಿಗೆ ಎಪಿಎಂಸಿ ಸೆಸ್ ವಿಧಿಸಿದೆ ಎಂದು ಆರೋಪಿಸಿದರು. ಇದೊಂದು ದೊಡ್ಡ ಹಗರಣವಾಗಿದ್ದು, ನಾಮನಿರ್ದೇಶಿತ ಮೂವರು ಸದಸ್ಯರು ಇದನ್ನು ಪತ್ತೆ ಹಚ್ಚಿದ ನಂತರ ಕೇಂದ್ರದ ಬಳಿಗೆ ನಿಯೋಗ ತೆರಳುವುದಾಗಿ ಅಧ್ಯಕ್ಷರು ಸಮಜಾಯಿಷಿಕೆ ನೀಡುತ್ತಿದ್ದಾರೆ ಎಂದು ಟಾಟೂ ಮೊಣ್ಣಪ್ಪ ಟೀಕಿಸಿದರು.

 ಈ ಹಗರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸೆ.11 ರಂದು ಎಪಿಎಂಸಿ ಕಛೇರಿಗೆ ಮುತ್ತಿಗೆ ಹಾಕಲಾಗುವುದು. ಶ್ರೀಉಮಾಮಹೇಶ್ವರಿ ದೇವಾಲಯದ ಬಳಿಯಿಂದ ಎಪಿಎಂಸಿಯವರೆಗೆ ಜಿಲ್ಲೆಯ ರೈತರ ಬೆಂಬಲದೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದೆಂದು ತಿಳಿಸಿದರು.
ಎಪಿಎಂಸಿಗಳನ್ನು ಸ್ಥಳೀಯ ರೈತರ ಹಿತ ಕಾಯುವುದಕ್ಕಾಗಿ ರಚಿಸಲಾಗಿದೆಯೇ ಹೊರತು ಹೊರ ದೇಶದ ಫಸಲನ್ನು ಮಾರಾಟ ಮಾಡಲು ಅಲ್ಲವೆಂದು ಸ್ಪಷ್ಟಪಡಿಸಿದರು.

 ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕೊಡಗಿನಲ್ಲಿ ಅತೀ ಹೆಚ್ಚು ಕಾಳು ಮೆಣಸನ್ನು ಬೆಳೆಯಾಗುತ್ತಿದೆ. ಆದರೆ, ಒಂದು ತಿಂಗಳಿಗೆ 45 ಮೆಟ್ರಿಕ್ ಟನ್ ಕಾಳು ಮೆಣಸನ್ನು ಆಮದು ಮಾಡಿಕೊಳ್ಳುತ್ತಿರುವುದು ದೊಡ್ಡ ದಂಧೆಯಾಗಿದೆಯೆಂದು ಆರೋಪಿಸಿದರು. ಇದರ ಹಿಂದೆ ಪ್ರಭಾವಿ ರಾಜಕಾರಣಿಗಳು ಇರುವ ಬಗ್ಗೆ ಸಂಶಯವಿದ್ದು, ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು. 

ಕಿಸಾನ್ ಘಟಕದ ಅಧ್ಯಕ್ಷರಾದ ನೆರವಂಡ ಉಮೇಶ್ ಮಾತನಾಡಿ, ದಲ್ಲಾಳಿಗಳಿಂದ ರೈತರಿಗೆ ಅನ್ಯಾಯವಾಗುವುದನ್ನು ತಡೆಯಲು ಎಪಿಎಂಸಿಗಳನ್ನು ಸ್ಥಾಪಿಸಲಾಗಿದೆಯೇ ಹೊರತು, ಸೆಸ್ ಸಂಗ್ರಹಿಸಿ ಲಾಭ ಗಳಿಸುವುದಕ್ಕೆ ಅಲ್ಲವೆಂದರು. ಕಲಬೆರಕೆ ಕಾಳು ಮೆಣಸಿನಿಂದಾಗಿ ಕೊಡಗಿನ ಕಾಳು ಮೆಣಸಿನ ಬೆಲೆ ಕುಸಿಯುವ ಆತಂಕವಿದೆ ಎಂದರು. ವಿಯೆಟ್ನಾಂ ಕಾಳು ಮೆಣಸು ಆಮದಾಗುತ್ತಿರುವ ಬಗ್ಗೆ ಮೊದಲೆ ಕ್ರಮ ಕೈಗೊಂಡು ತಡೆಯಲು ಪ್ರಯತ್ನಿಸದ ಆಡಳಿತ ಮಂಡಳಿ ಮೂವರು ನಾಮ ನಿರ್ದೇಶಿತ ಸದಸ್ಯರು ಪತ್ತೆ ಹಚ್ಚಿದ ನಂತರ ಯಾಕೆ ಸ್ಪಷ್ಟೀಕರಣ ನೀಡಿದರೆಂದು ಉಮೇಶ್ ಪ್ರಶ್ನಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟಿದ್ದ ಎಪಿಎಂಸಿ ಮಳಿಗೆಗಳನ್ನು ಕಾನೂನು ಉಲ್ಲಂಘಿಸಿ ಕಾಳು ಮೆಣಸು ವ್ಯವಹಾರದ ಸಂಸ್ಥೆಗೆ ನೀಡಲಾಗಿದೆ. ಅಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ರಾಜೀನಾಮೆ ನೀಡದಿದ್ದಲ್ಲಿ ಸದಸ್ಯತ್ವವನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಎಲ್ಲಾ ಕ್ಷೇತ್ರಗಳಲ್ಲು ಸ್ವದೇಶಿ ಅಭಿಯಾನವನ್ನು ನಡೆಸುತ್ತಿರುವ ಬಿಜೆಪಿ ಮಂದಿ ವಿಯೆಟ್ನಾಂನಿಂದ ಕಾಳು ಮೆಣಸು ಆಮದಾಗುವುದನ್ನು ಹೇಗೆ ಸಹಿಸಿಕೊಂಡಿದೆಯೆಂದು ಉಮೇಶ್ ಪ್ರಶ್ನಿಸಿದರು.

ಬಾಳೆಲೆಯಲ್ಲಿ ಸಾಲ ಮರುಪಾವತಿಸಲಾಗದ ಕಾರ್ಮಿಕನ ಮೇಲೆ ನಾಯಿಗಳನ್ನು ಛೂ ಬಿಟ್ಟು ಕಚ್ಚಿಸಿದ ಪ್ರಕರಣವನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸಲಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ನೆರವಂಡ ಉಮೇಶ್ ಶ್ರೀ ಭಗವತಿ ದೇಗುಲವನ್ನು ಅಪವಿತ್ರ ಗೊಳಿಸಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ವೃತ್ತಿಪರ ಘಟಕದ ಅಧ್ಯಕ್ಷರಾದ ಅಂಬೆಕಲ್ ನವೀನ್ ಕುಶಾಲಪ್ಪ, ಸೇವಾದಳದ ಮಾಜಿ ಅಧ್ಯಕ್ಷರಾದ ಮೋಹನ್ ರಾಜ್ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ ತೆನ್ನಿರ ಮೈನ  ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News