ಪಾವಗಡಕ್ಕೆ ನೇರ ತುಂಗಾಭದ್ರಾ ನೀರು:ಸೆ.06ರಂದು ಸಭೆ ಕರೆದ ಸಿಎಂ ಸಿದ್ದರಾಮಯ್ಯ
ತುಮಕೂರು,ಸೆ.04:ಕಳೆದ 28 ದಿನಗಳಿಂದ ಶಾಶ್ವತ ಶುದ್ಧ ಕುಡಿಯುವ ನೀರಿಗಾಗಿ ಒತ್ತಾಯಿಸಿ ಪಾವಗಡದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆ ಬಗ್ಗೆ ಮಾಜಿ ಸಚಿವ ವೆಂಕಟರಮಣಪ್ಪ ನೇತೃತ್ವದಲ್ಲಿ ಸಂಸದ ಪಿ.ಚಂದ್ರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಇಂದು ನಡೆದ ಕ್ಯಾಬಿನೆಟ್ ಸಭೆಯ ಬಳಿಕ ಸಂಸದ ಚಂದ್ರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ಕರೆದೊಯ್ದ ವೆಂಕಟರಮಣಪ್ಪನವರು, ಬರಪೀಡಿತ ತಾಲೂಕಾಗಿರುವ ಪಾವಗಡಕ್ಕೆ ಹೊಸಪೇಟೆಯಿಂದ ನೇರವಾಗಿ ತುಂಗಾಭದ್ರ ನೀರನ್ನು ಪೂರೈಸುವ ಯೋಜನೆಗೆ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ನೇರವಾಗಿ ನೀರು ಪೂರೈಸುವ ಯೋಜನೆಗೆ ಅವಶ್ಯಕವಿರುವ 2000ಕೋಟಿ ಅನುದಾನವನ್ನು ಹಂತ ಹಂತವಾಗಿ ಬಿಡುಗಡೆ ಮಾಡಬೇಕು,ಎಸ್‍ಸಿಪಿ, ಟಿಎಸ್‍ಪಿ ಉಪಯೋಜನೆಯ ಅನುದಾನವನ್ನು ಕ್ರೂಢೀಕರಿಸಿ, ಮೊದಲ ಹಂತದಲ್ಲಿ 500 ಕೋಟಿ ಬಿಡುಗಡೆ ಮಾಡಿ,ಯೋಜನೆಯ ಡಿಪಿಆರ್ ತಯಾರಿಸುವಂತೆ ಒತ್ತಾಯಿಸಿರುವುದಾಗಿ ಮಾಜಿ ಸಚಿವ ವೆಂಕಟರಮಣಪ್ಪ ಹೇಳಿದರು.
ಪಾವಗಡಕ್ಕೆ ನೇರವಾಗಿ ನೀರು ಪೂರೈಸುವ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಸಿಎಂ ಗೃಹಕಚೇರಿ ಕೃಷ್ಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ಹಣಕಾಸು ಇಲಾಖೆಯೊಂದಿಗೆ ಸೆಪ್ಟಂಬರ್ 6 ರಂದು ಬುಧವಾರ ಸಭೆ ನಿಗದಿಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದು,ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಭಾಗಿಯಾಗಲಿದ್ದಾರೆ ಎಂದು ವೆಂಕಟರಮಣಪ್ಪ ತಿಳಿಸಿದ್ದಾರೆ.
ಕಳೆದ 28 ದಿನಗಳಿಂದ ಪಾವಗಡದ ತಾಲ್ಲೂಕು ಭವನದ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಕಳೆದ ಬುಧವಾರ, ಗುರುವಾರ ಪಾವಗಡ ತಾಲೂಕ್ ಬಂದ್ ಮಾಡುವ ಮೂಲಕ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು, ಈ ವೇಳೆ ಪ್ರತಿಭಟನಾಕಾರರನ್ನು ಭೇಟಿ ಮಾಡಿದ್ದಾಗ,ಪಾವಗಡಕ್ಕೆ ನೀರು ಪೂರೈಸುವ ಯೋಜನೆ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ನೀಡಿದ್ದ ಭರವಸೆಯಂತೆ,ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಯೋಜನೆ ಶೀಘ್ರವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದ್ದು,ಪಾವಗಡಕ್ಕೆ ನೀರು ಪೂರೈಸುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬುಧವಾರ ಸಭೆಯಲ್ಲಿ ಯೋಜನೆ ಅನುಷ್ಠಾನದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಮಾಜಿ ಸಚಿವ ವೆಂಕಟರಮಣಪ್ಪ ತಿಳಿಸಿದ್ದಾರೆ.