×
Ad

ಕನಿಷ್ಠ ಕೂಲಿ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹಿಸಿ ಕಾರ್ಮಿಕರ ಬೃಹತ್ ಪ್ರತಿಭಟನೆ

Update: 2017-09-04 22:57 IST

ಬೆಂಗಳೂರು, ಸೆ. 4: ಕನಿಷ್ಠ ಕೂಲಿ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ವಿವಿಧ ವಲಯ ಕಾರ್ಮಿಕರು ನಗರದ ಸಿಟಿ ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವನದವರೆಗೂ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.

ಕಟ್ಟಡ ಕಾರ್ಮಿಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಕೆಎಸ್ಸಾರ್ಟಿಸಿ ನೌಕರರು, ದಿನಗೂಲಿ ಕಾರ್ಮಿಕರು ಸೇರಿದಂತೆ ಬೇರೆ-ಬೇರೆ ವಲಯದ ಕಾರ್ಮಿಕರು ಜಂಟಿಯಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರ ವಿರುದ್ಧ ಘೋಷಣೆಗಳನ್ನು ಕೂಗಿ ಒತ್ತಾಯಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್, ಕೇಂದ್ರ ಸರಕಾರದ ರೈತ, ಕಾರ್ಮಿಕ ವಿರೋ ನೀತಿಗಳಿಂದ ಕಳೆದ ಮೂರು ವರ್ಷಗಳಿಂದ ದೇಶದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟು ಹೆಚ್ಚಾಗಿದೆ. ಸಾಮಾಜಿಕ ನ್ಯಾಯ ಮರೀಚಿಕೆಯಾಗುತ್ತಿದೆ. ಬೆಲೆ ಏರಿಕೆಯಿಂದ ದುಡಿಯುವ ಜನರು ತತ್ತರಿಸುತ್ತಿದ್ದಾರೆ ಎಂದು ಹೇಳಿದರು.

ಸಾರ್ವಜನಿಕ ರಂಗದ ಕೈಗಾರಿಕೆಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಪ್ರಧಾನಿ ಚುನಾವಣೆಗೂ ಮೊದಲು ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಲವಾಗಿದ್ದಾರೆ. ಮತ್ತೊಂದು ಕಡೆ ರಾಜ್ಯ ಸರಕಾರ ಕಾರ್ಮಿಕ ವಿರೋ ನೀತಿಗಳನ್ನು ಜಾರಿ ಮಾಡುವಲ್ಲಿ ಯಶಸ್ವಿಯಾಗಿದ್ದು, ಮಾಲಕರ ಪರವಾದ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿರುವ ಚಿನ್ನದ ನಿಕ್ಷೇಪಗಳಲ್ಲಿ ಕೂಡಲೇ ಕೆಲಸ ಆರಂಭಿಸಬೇಕು. ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರನ್ನು ಕೈಗಾರಿಕಾ ವಿವಾದ ಕಾಯ್ದೆಯಡಿ ಕಾರ್ಮಿಕರು ಎಂದು ಪರಿಗಣಿಸಿ ಕನಿಷ್ಠ ವೇತನ ನೀಡಬೇಕು. ತ್ರಿಪಕ್ಷೀಯ ಸಭೆಗಳಲ್ಲಿ ಕಾರ್ಮಿಕ ಸಂಘಟನೆಗಳಿಗೆ ಆದ್ಯತೆ ನೀಡಬೇಕು. ಕೃಷಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಬೇಕು. ಗುತ್ತಿಗೆ ಕಾರ್ಮಿಕರಿಗೆ ಸಮಾಜ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದರು.

 ಕಾರ್ಮಿಕ ಮುಖಂಡ ಬಿ.ಲೋಕೇಶ್ ಮಾತನಾಡಿ, ರೈತ, ಕಾರ್ಮಿಕ ವಿರೋ ಸರಕಾರಗಳನ್ನು ಕಾರ್ಮಿಕರ ಒಗ್ಗೂಡುವ ಮೂಲಕ ಕಿತ್ತು ಎಸೆಯಬೇಕಾಗಿದೆ. ಕೇಂದ್ರದಲ್ಲಿನ ಎನ್‌ಡಿಎ ಸರಕಾರ ಸಂಪೂರ್ಣವಾಗಿ ಕಾರ್ಪೋರೇಟ್, ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದ್ದು, ಪ್ರಧಾನಿ ವೋದಿ ಅವರ ವಕ್ತಾರರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಟೀಕಿಸಿದರು.

ಕೇಂದ್ರ ಸರಕಾರ ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು. ಮಹಾದಾಯಿ ನೀರಿನ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶ ಮಾಡಬೇಕು. ಸಾರ್ವಜನಿಕ ವಲಯ ಖಾಸಗೀಕರಣ ಕೈ ಬಿಡಬೇಕು. ಗೋ ರಕ್ಷಣೆಯ ಹೆಸರಿನಲ್ಲಿ ಮಾಂಸ ಉದ್ಯಮದ ಕಾರ್ಮಿಕರನ್ನು ಹಿಂಸಿಸುವುದನ್ನು ನಿಲ್ಲಿಸಬೇಕು. ಹೊಟೇಲ್ ಮೇಲೆ ವಿಸಿರುವ ಜಿಎಸ್‌ಟಿ ರದ್ದುಪಡಿಸಬೇಕು. ಮಾಧ್ಯಮಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ವೇತನ ಮಂಡಳಿ ರಚನೆ ಮಾಡಿ, ಸೇವಾ ಭದ್ರತೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಬೇಡಿಕೆಗಳು: ಕಾರ್ಮಿಕ ಸಂಘಟನೆಗಳ ಮಾನ್ಯತೆಗೆ ಕಾನೂನು ರಚಿಸಬೇಕು. ಸಾರಿಗೆ ನಿಗಮಗಳಲ್ಲಿ ಮಾನ್ಯತೆಗಾಗಿ ಚುನಾವಣೆ ನಡೆಸಬೇಕು. ದುಡಿಯುವ ಮಹಿಳೆಯರಿಗೆ ಹೆರಿಗೆ ರಜೆ ಹಾಗೂ ಋತುಚಕ್ರ ರಜೆ ನೀಡಲು ಕಾನೂನು ತಿದ್ದುಪಡಿ ಮಾಡಬೇಕು. ಗ್ರಾಮ ಪಂಚಾಯತ್ ನೌಕರರನ್ನು ಖಾಯಂ ಮಾಡಬೇಕು. ವಸತಿ ಶಾಲೆ ಹಾಗೂ ನಿಲಯಗಳ ಬೋಧಕೇತರ ಸಿಬ್ಬಂದಿಯನ್ನು ದಿನಗೂಲಿ ನೌಕರರು ಎಂದು ಪರಿಗಣಿಸಬೇಕು. ಎಲ್ಲ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯಗಳು ಸ್ಥಾಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕಾರ್ಮಿಕರು ಸರಕಾರವನ್ನು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News